ತಾಯಂದಿರ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಲು ಗುರಿ: ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

RV VV
Published on

ಬೆಂಗಳೂರು: ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ನಮ್ಮ ಸರ್ಕಾರ ಗುರಿ ಹೊಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಸಹಯೋಗದಲ್ಲಿ ಆರ್‌ವಿ ವಿಶ್ವವಿದ್ಯಾಲಯದಿಂದ ನಗರದ ಆರ್‌ವಿ ಟೀಚರ್ಸ್‌ ಕಾಲೇಜು ಕಟ್ಟಡದಲ್ಲಿ ಶುಕ್ರವಾರ ಆಯೋಜಿಸಿದ್ದ ‘ ಕರ್ನಾಟಕದಲ್ಲಿ ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡುವುದು’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಸರ್ಕಾರದಿಂದ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ವಿವಿಧ ಯೋಜನೆಗಳನ್ನುಅನುಷ್ಠಾನಕ್ಕೆ ತಂದಿದ್ದೇವೆ.ಸಚಿವ ಸಂಪುಟದಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಇಬ್ಬರು ಸ್ರ್ರೀರೋಗ ತಜ್ಞ, ಮಕ್ಕಳ ತಜ್ಞರು ಮತ್ತು ಓರ್ವ ರೇಡಿಯಾಲಜಿಸ್ಟ್ ನೇಮಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. 24*7 ಅವಧಿಯಲ್ಲಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಈ ಮೂಲಕ ಮುಂದಿನ ಎರಡೂವರೆ ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸಲು ಗುರಿ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

ಡಾ.ರಂಜಿನಿ ಮಾತನಾಡಿ, ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ತಾಯಂದಿರ ಮರಣ ಸಂಖ್ಯೆ ತುಸು ಜಾಸ್ತಿ ಇದೆ. ವರ್ಷದಿಂದ ವರ್ಷಕ್ಕೆ ಮರಣ ಪ್ರಮಾಣ ಕಡಿಮೆಗೊಳಿಸಲು ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಮಾನವ ಸಂಪನ್ಮೂಲ ಸೇರಿ ಇತರ ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ಕಲ್ಪಿಸಬೇಕಿದೆ ಎಂದು ಸಲಹೆ ನೀಡಿದರು.

ತಾಯಿ ಮತ್ತು ಭ್ರೂಣದ ಯೋಗಕ್ಷೇಮಕ್ಕೂ ಹೆಚ್ಚಿನ ಗಮನ ನೀಡಬೇಕಿದೆ. ಆಯಾ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಸರ್ಕಾರಗಳು ವಿಶೇಷ ಯೋಜನೆ ರೂಪಿಸುವ ಅಗತ್ಯವಿದೆ.ಸುರಕ್ಷಿತ ತಾಯ್ತನಕ್ಕೆ ಆರೋಗ್ಯ ವ್ಯವಸ್ಥೆ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಬೇಕಿದೆ ಎಂದು ಆರ್‌ವಿ ವಿವಿಯ ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಸಿ. ರಾಘವೇಂದ್ರ ಹೇಳಿದರು.

ಇದೇ ವೇಳೆ ನವಜಾತ ಶಿಶು,ತಾಯಂದಿರ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಸೆಂಟರ್ ಫಾರ್ ಗ್ಲೋಬಲ್ ಹೆಲ್ತ್ ಅಂಡ್ ಡೆವಲಪ್ಮೆಂಟ್ ಹಾಗೂ ಆರ್‌ವಿ ವಿವಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.ಆರೋಗ್ಯ ಇಲಾಖೆಯ ತಾಯಿ ಆರೋಗ್ಯ ವಿಭಾಗದ ಉಪನಿರ್ದೇಶಕ ಡಾ.ರಾಜ್‌ಕುಮಾರ್ ಸೇರಿ ಖಾಸಗಿ ಆಸ್ಪತ್ರೆಯ ವಿವಿಧ ವೈದ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net