ಶೂನ್ಯ ಮಾನವ-ಪ್ರಾಣಿ ಸಂಘರ್ಷ ವಲಯ ಸಾಪನೆ ಗುರಿ: ಸಿಎಂ ಸಿದ್ದರಾಮಯ್ಯ

elephnat meeting
Published on

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಸಾಮರಸ್ಯ ಯೋಜನೆಯಡಿ ಅರಣ್ಯ ಪ್ರದೇಶಗಳಲ್ಲಿ ಶೂನ್ಯ ಮಾನವ-ಪ್ರಾಣಿ ಸಂಘರ್ಷ ವಲಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಅದರಲ್ಲೂ ಆನೆ ದಾಳಿ ತಡೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಆಯೋಜಿಸಿರುವ 2 ದಿನಗಳ ಜಾಗತಿಕ ಮಾನವ-ಆನೆ ಸಂಘರ್ಷ ನಿರ್ವಹಣೆಯ ಕುರಿತಾದ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಈ ಯೋಜನೆಯಡಿ ಪ್ರಾಣಿಗಳಿಗೆ ನೀರಿನ ಭದ್ರತೆ, ಆವಾಸ ಸ್ಥಾನದ ಸುಧಾರಣೆ ಹಾಗೂ ಸಮುದಾಯಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಒಳಗೊಂಡಿರುತ್ತದೆ. ಆವಾಸಸ್ಥಾನ ಸುಧಾರಣೆ ಚಟುವಟಿಕೆಗಳಾದ ಜನರ ಪ್ರದೇಶಗಳಿಗೆ ಕಾಡು ಪ್ರಾಣಿಗಳು ದಾರಿ ತಪ್ಪಿ ಬರುವುದನ್ನು ತಪ್ಪಿಸಲು, ಹುಲ್ಲುಗಾವಲು ಅಭಿವೃದ್ಧಿ, ಬಿದಿರಿನ ಪುನರುತ್ಪಾದನೆ ಮತ್ತು ಸೌರ ನೀರಿನ ಪಂಪ್ ಸೌಲಭ್ಯಗಳೊಂದಿಗೆ ನೀರಿನ ರಂಧ್ರಗಳ ರಚನೆಯನ್ನು ಕೈಗೊಳ್ಳಲಾಗುತ್ತದೆ. ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಸ್ಥಳೀಯ ಸಮುದಾಯಗಳ ಸಹಕಾರದೊಂದಿನ ಪ್ರಯತ್ನ ಸಾಗಿದೆ ಎಂದರು.

ರಾಜ್ಯದಲ್ಲಿ ಈಗಾಗಲೇ 8 ವಿಶೇಷ ಗಜ ಕಾರ್ಯಪಡೆ ಸ್ಥಾಪಿಸಿದ್ದು, ಪ್ರತಿಯೊಂದಕ್ಕೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಪ್ರಮುಖ ಸಂಘರ್ಷ ವಲಯಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಆನೆ ದಾಳಿಯನ್ನು ನಿಭಾಯಿಸಲು 9 ಗಜ ಕಾರ್ಯಪಡೆ ತಂಡಗಳನ್ನು ಸ್ಥಾಪಿಸಿದೆ. ನಿಯಂತ್ರಣ ಕೊಠಡಿಗಳ ಸಹಕಾರದೊಂದಿಗೆ ಈ ಕಾರ್ಯಪಡೆಗಳು ಸಾರ್ವಜನಿಕ ಮತ್ತು ರೈತರ ರಕ್ಷಣೆಗೆ ತ್ವರಿತ ಪ್ರತಿಕ್ರಿಯೆ ನೀಡುವ, ಆನೆಗಳ ಮುಖಾಮುಖಿಯಿಂದ ಸಮುದಾಯ ರಕ್ಷಿಸುವ ಕೆಲಸ ಸಾಗಿದೆ. ಈ ಕಾರ್ಯಪಡೆಗಳು ಕಳೆದೊಂದು ವರ್ಷದಲ್ಲಿ 1,200 ಕ್ಕೂ ಹೆಚ್ಚು ಆನೆ ದಾಳಿ ಘಟನೆಗಳಿಗೆ ಪ್ರತಿಕ್ರಿಯಿಸಿದ್ದು, ಆನೆಗಳನ್ನು ಸುರಕ್ಷಿತ ಆವಾಸಸ್ಥಾನಗಳಿಗೆ ಓಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

ಸಂಘರ್ಷ ತಡೆಗೆ 150 ಕೋಟಿ ಮೀಸಲು:

ರಾಜ್ಯದಲ್ಲಿ ಕಳೆದ 10 ವರ್ಷದ ಅವಧಿಯಲ್ಲಿ ಮಾನವ-ಆನೆ ಸಂಘರ್ಷದ 2,500 ಕ್ಕೂ ಹೆಚ್ಚು ಘಟನೆಗಳು ನಡೆದಿವೆ. ಇದರಿಂದ 350ಕ್ಕೂ ಹೆಚ್ಚು ಜನರ ಸಾವು ಮತ್ತು ಬೆಳೆ ನಷ್ಟವಾಗಿದೆ. ಈ ಸಮಸ್ಯೆತಡೆಗೆ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದು, ಮಾನವ-ಆನೆ ಸಂಘರ್ಷ ತಡೆಗೆಂದೇ ವಾರ್ಷಿಕ 150 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ವೆಚ್ಚ ಮಾಡಲಾಗುತ್ತಿದೆ. ಜತೆಗೆ 300 ಕಿ.ಮೀ.ಗಿಂತಲೂ ಹೆಚ್ಚು ರೈಲ್ವೇ ಬ್ಯಾರಿಕೇಡ್, 800 ಕಿ.ಮೀ. ಸೌರ ಬೇಲಿ ಮತ್ತು ಆನೆ ತಡೆ ಕಂದಕಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ತಂತ್ರಜ್ಞಾನದ ಅಳವಡಿಕೆ:

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಕರ್ನಾಟಕ ದೇಶದಲ್ಲೇ ಅತಿ ಹೆಚ್ಚಿನ ಆನೆಗಳನ್ನು (6,395) ಹೊಂದಿರುವ ರಾಜ್ಯವಾಗಿದೆ. ಮಾನವ-ವನ್ಯಜೀವಿ ಸಂಘರ್ಷ ತಡೆಗೆ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಇದೇ ಮಾದರಿಯನ್ನು ಅರಣ್ಯ ಒತ್ತುವರಿ ತಡೆಗೂ ಅಳವಡಿಸಿಕೊಳ್ಳಲಾಗುವುದು. ರಾಜ್ಯದ ಗಡಿಗಳಲ್ಲಿ ಮಾನವ-ಆನೆ ಸಂಘರ್ಷ ಪರಿಹರಿಸಲು ಮತ್ತು ನೀಲಗಿರಿ ತಪ್ಪಲಿನಲ್ಲಿ ಸಂರಕ್ಷಿತ ಕಾನನದೊಳಗೆ ಆನೆಗಳ ಸುರಕ್ಷಿತ ಸಂಚಾರ ಉತ್ತೇಜಿಸಲು ಅಂತಾರಾಜ್ಯ ಸಮನ್ವಯ ಸಮಿತಿಯನ್ನು (ಐಸಿಸಿ) ರಚಿಸಿ ಕಾರ್ಯಸೂಚಿಗೆ ಸಹಿ ಹಾಕಲಾಗಿದೆ ಎಂದರು.

ಆನೆಗಳ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ರೇಡಿಯೋ ಕಾಲರ್ ಅಳವಡಿಸುವ ಕಾರ್ಯವನ್ನು ಸರ್ಕಾರ ಮುಂದುವರಿಸಿಕೊಂಡು ಬರುತ್ತಿದೆ. ಜಿಎಸ್‌ಎಂ ಆಧಾರಿತ ಕ್ಯಾಮರಾ ಟ್ರ್ಯಾಪ್ ಹಾಗೂ ಗರುಡ ಇ- ನಿಗಾ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ವನ್ಯಜೀವಿ ಮತ್ತು ಜನರ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಇಲಾಖೆಯು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಖಂಡ್ರೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೇರಳ ಅರಣ್ಯ ಸಚಿವ ಶಶೀಂದ್ರನ್, ತಮಿಳುನಾಡು ಸಚಿವ ಡಾ.ಮದಿವೆಂಥನ್, ತೆಲಂಗಾಣ ಸಚಿವೆ ಕೊಂಡ ಸುರೇಖ, ಜಾರ್ಖಂಡ್ ಸಚಿವ ಬೈದ್ಯನಾಥ್, ರಾಜ್ಯ ಆರಣ್ಯ ಇಲಾಖೆಯ ಎಸಿಎಸ್ ಮಂಜುನಾಥ್ ಪ್ರಸಾದ್, ಮನೋಜ್ ರಾಜನ್ ಮತ್ತಿತರರಿದ್ದರು.

ಪ್ರಶಸ್ತಿ ವಿತರಣೆ:

ಮಾನವ-ಆನೆ ಸಂಘರ್ಷ ತಡೆಯುವಲ್ಲಿ ಸತತವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ 2 ಸಂಘ-ಸಂಸ್ಥೆಗಳು ಸೇರಿ ಹಿರಿಯ ವನ್ಯಜೀವಿ ತಜ್ಞರು ಮತ್ತು ಇತರರು ಸೇರಿ ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಜಯ್ ದೇಸಾಯಿ, ಆನೆ ತಜ್ಞ; ಡಾ. ಎ.ಜೆ.ಜಾನ್‌ಸಿಂಗ್, ವನ್ಯಜೀವಿ ಸಂರಕ್ಷಕ; ಡಾ.ರಾಮನ್ ಸುಕುಮಾರ್, ಪರಿಸರ ತಜ್ಞ; ಡಾ. ಬಿ.ಸಿ.ಚಿಟ್ಟಿಯಪ್ಪ, ವನ್ಯಜೀವಿ ವೈದ್ಯರು; ರಾಜಣ್ಣ, ಕಾವಡಿ; ದೊಡ್ಡ ಮಾಸ್ತಿ, ಕಾವಡಿ (ಮರಣೋತ್ತರ); ಕಾರ್ತಿಕ್ ಗೌಡ, ಆನೆ ಕಾರ್ಯಪಡೆ ಸಿಬ್ಬಂದಿ (ಮರಣೋತ್ತರ), ರಂಜನ್ ಕೆ.ಪಿ., ಡಿಆರ್​​ಎಫ್​. ವೈಲ್ಡ್‌ ಲೈಫ್​​ ಟ್ರಸ್ಟ್ ಆಫ್​​ ಇಂಡಿಯಾ, ನೇಚರ್ ಕನ್ಸರ‌್ವೇಷನ್ (ಎರಡೂ ಸಂಘ-ಸಂಸ್ಥೆಗಳು).

ಅರಣ್ಯ ರಕ್ಷಣೆ ಹಾಗೂ ಮಾನವ-ಆನೆ ಸಂಘರ್ಷ ತಡೆಗೆ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರೈತರಿಗೆ ಅನಗತ್ಯ ಕಿರುಕುಳ ನೀಡದೆ ಜಮೀನು ತಂಟೆ-ತಕರಾರುಗಳನ್ನು ನಿವಾರಿಸುವ ಜತೆಗೆ ರೈತರ ಬೆಳೆ ನಷ್ಟಕ್ಕೆ ಪರಿಹಾರ ಬಿಡುಗಡೆಗೆ ಶೀಘ್ರ ಸ್ಪಂದಿಸಬೇಕು. ಆನೆಗಳ ಸೆರೆ ಹಿಡಿಯುವ ಖೆಡ್ಡಾ ಯೋಜನೆಯನ್ನು ಮರುಪರಿಶೀಲಿಸಬೇಕು.

- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net