

ಹುಬ್ಬಳ್ಳಿ: ಉತ್ತಮ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳಾಗಬೇಕೆಂದು ಬಯಸುವವರು ನಿರಂತರ ಕಲಿಕೆಯಲ್ಲಿರಬೇಕು. ಇದರಿಂದ ಮಾತ್ರ ತಾವು ಇಟ್ಟುಕೊಂಡಿರುವ ಗುರಿ ತಲುಪಲು ಸಾಧ್ಯ ಎಂದು ಮ್ಯಾನೇಜ್‌ಮೆಂಟ್ ತರಬೇತುದಾರ, ಶಿಕ್ಷಣ ತಜ್ಞ ಡಾ. ಗುರುರಾಜ ಪಾಟೀಲ ಅಭಿಪ್ರಾಯಪಟ್ಟರು.
ವಿಪ್ರ ಬಿಜಿನೆಸ್ ಫೋರಂ (ವಿಬಿಎಫ್) ಮತ್ತು ಅಗಸ್ತ್ಯ ವಾಹಿನಿಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಬ್ರಾಹ್ಮಿನ್ ಬಿಜಿನೆಸ್ ಕಾನ್‌ಕಲೇವ್ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಲಿಕೆಯಲ್ಲಿ ಹೊಸತು ಅಳವಡಿಸಕೊಳ್ಳಬೇಕು. ನೀವು ಉತ್ತಮ ಉದ್ಯಮಗಳಾಗದಿದ್ದಲ್ಲಿ ಸಮಾಜದ ಮುಂದೆ ಹಾಸ್ಯಾಸ್ಪದ ವ್ಯಕ್ತಿಗಳಾಗಿ ಮಾರ್ಪಡುತ್ತೀರಿ. ಹೀಗಾಗಿ ನಿಮ್ಮ ಆಯ್ಕೆ ಕ್ಷೇತ್ರದಲ್ಲಿ ಹೊಸತು ರೂಢಿಗತ ಮಾಡಿಕೊಳ್ಳಬೇಕು ಎಂದರು.
ಕೋವಿಡ್ ಸಂದರ್ಭದಲ್ಲಿ ಇಡೀ ಜಗತ್ತು ತಲ್ಲಣಗೊಂಡಿತ್ತು. ಆಗ ಹೊಸ ವಿಚಾರ, ವಿಷಯಗಳನ್ನು ಜನರು ಅರಿತುಕೊಳ್ಳುವಂತೆ ಮಾಡಿತು. ನಮಗೆ ಗೊತ್ತಿರದಿದ್ದ ಜೂಮ್ ಮೀಟಿಂಗ್, ಆನ್‌ಲೈನ್ ಸಭೆ, ವೆಬಿನಾರ್‌ಗಳು ಹೊಸ ಅವಕಾಶ ತಂದುಕೊಟ್ಟವು. ಕಚೇರಿಗೆ ಹೋಗದೇ ಮನೆಯಲ್ಲಿಯೇ ಕುಳಿತು ಉದ್ಯೋಗ ಮಾಡುವ ವಾತಾವರಣ ನಿರ್ಮಾಣವಾಯಿತು ಎಂದರು.
ದೇಸಾಯಿ ಕೆಮಿಕಲ್ಸ್‌ನ ಮಾಲೀಕ ಹಾಗೂ ಎನ್‌ಎಲ್‌ಇ ಸೊಸೈಟಿ ಗೌರವ ಕಾರ್ಯದರ್ಶಿ ರಾಮಚಂದ್ರ (ರಾಜಾ) ಎನ್. ದೇಸಾಯಿ ಉದ್ಘಾಟಿಸಿದರು.
ವಿಪ್ರ ಬಿಜಿನೆಸ್ ಫೋರಂ ಅಧ್ಯಕ್ಷ ಜಯತೀರ್ಥ ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು. ವಿಪ್ರ ಸಮುದಾಯದ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.
ಫೋರಂ ಸಂಘಟನಾ ಕಾರ್ಯದರ್ಶಿ ರವಿರಾಮ ನಾರಾಯಣ, ಪ್ರಾದೇಶಿಕ ನಿರ್ದೇಶಕ ಶರದ್ ರಾಜಪುರೋಹಿತ, ಖಜಾಂಚಿ ರಾಮಪ್ರಸಾದ, ಜಂಟಿ ನಿರ್ದೇಶಕಿ ವೈಶಾಲಿ ಪಾಟೀಲ, ಅಗಸ್ತ್ಯ ವಾಹಿನಿ ನಿರ್ದೇಶಕ ಸಾಗರ ಗ್ರಾಮಪುರೋಹಿತ, ಜಂಟಿ ನಿರ್ದೇಶಕ ಕೃಷ್ಣ ಜೋಶಿ ಇತರರು ಭಾಗವಹಿಸಿದ್ದರು.