ಬದ್ಧತೆ, ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ: ಶಂಕರ ದೇವನೂರು

21
Published on

ಮೈಸೂರು: ಬದ್ಧತೆ ಹಾಗೂ ಪರಿಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಗುರಿ ತಲುಪಬೇಕು ಎಂದು ನಿವೃತ್ತ ಮುಖ್ಯ ಇಂಜಿನಿಯರ್ ಶಂಕರ ದೇವನೂರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಿದ್ದಾರ್ಥ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಸ್ಯೆಗಳು ಸಾಧನೆಗೆ ಅಡ್ಡಿಯಾಗಬಾರದು. ಸಮಸ್ಯೆಗಳ ನಡುವೆಯೇ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗಳನ್ನು ಮಾಡಿದ್ದಾರೆ. ಸಮಸ್ಯೆಗಳ ನೆಪ ಮುಂದಿಟ್ಟುಕೊಂಡು ಓದಿನಲ್ಲಿ ನಿರಾಸಕ್ತಿ ತೋರಬಾರದು. ಅಂತಹ ಸಮಸ್ಯೆಗಳನ್ನು ಎದುರಿಸಿ ಬದ್ಧತೆ ಹಾಗೂ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಗುರಿ ಮುಟ್ಟಬಹುದು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ ಪ್ರತಿಭೆ ಅಂಕಿತಾ ರಾಜ್ಯಕ್ಕೇ ಮೊದಲ ಸ್ಥಾನ ಗಳಿಸಿದ್ದಾಳೆ. ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ನೀವು ಆಲೋಚಿಸಬೇಕು. ಆಕೆ ತನ್ನ ಗಮನವನ್ನು ಪಠ್ಯದ ಕಡೆಗೆ ಕೇಂದ್ರೀಕೃತಗೊಳಿಸಿದ ಕಾರಣ ಸಾಧನೆ ಮಾಡುವಂತಾಯಿತು ಎಂದರು.
ಮಾತು ಮೃದುವಾದಲ್ಲಿ ಅದು ಸಂಸ್ಕಾರವನ್ನು ತೋರುತ್ತದೆ. ಆಡುವ ಮಾತು ಜಗತ್ತನ್ನು ಗೆಲ್ಲುವಂತಿರಬೇಕು. ನಮ್ಮ ಮಾತುಗಳಲ್ಲಿ ಮಾನವೀಯ ಅಂತಃಕರಣ ತುಂಬಿರಬೇಕು. ನಿಮ್ಮ ಬದುಕು ಬೆಳಕಾಗಬೇಕಾದಲ್ಲಿ ಸಂತರು, ದಾಸರು, ಶರಣರ ತತ್ವಗಳಿಗೆ ತಲೆಬಾಗಬೇಕು ಎಂದು ಹೇಳಿದರು.
ಪ್ರಾಂಶುಪಾಲೆ ಪ್ರೊ.ಎನ್.ಮಾಹಾದೇವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರ ಪಾಲಿಕೆ ಆಯುಕ್ತೆ ಡಾ.ಎನ್.ಎನ್.ಮಧು ಪಟೇಲ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಪಿ.ಚಂದ್ರಶೇಖರ್, ಖಜಾಂಚಿ ಡಾ.ಎಂ.ಎಸ್.ವೇದಾ ಇತರರು ಇದ್ದರು.
ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net