

ಹಾನಗಲ್ಲ: ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರವನ್ನು ಬೆಳೆಸುವಲ್ಲಿ ದಾನಿಗಳ ಪಾತ್ರ ಮಹತ್ವದ್ದಾಗಿದ್ದು, ಅದರ ಫಲವಾಗಿ ಸಂಸ್ಥೆಗಳು ಬೃಹತ್ತಾಗಿ ಬೆಳೆದು ನಿಂತಿವೆ. ಗ್ರಾಮೀಣ ಪ್ರದೇಶದಲ್ಲಿಯೇ ಉನ್ನತ ಶಿಕ್ಷಣ ದೊರಕುವಂತಾದರೆ ಬಡ ಮಕ್ಕಳು ವಿದ್ಯಾವಂತರಾಗಲು ಸಾಧ್ಯ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಾವೇರಿ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಾಲಕರೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಉಪನ್ಯಾಸಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಆಸಕ್ತಿ ಎಲ್ಲವೂ ಒಳಗೊಂಡರೆ ಗುರಿ ಸಾಧಿಸಲು ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿ, ಕಾಲೇಜು ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಯುವಜನೋತ್ಸವದಂಥ ವೇದಿಕೆಗಳು ಪ್ರತಿಭಾನ್ವಿತರಿಗೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಎಚ್. ಹೊಳಿಯಣ್ಣನವರ ಮಾತನಾಡಿ, ಕಳೆದ 20 ದಿನಗಳ ಹಿಂದೆ ನಮ್ಮ ಕಾಲೇಜಿನಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ನಡೆದ ಯುವ ಜನೋತ್ಸವ ಕಾರ್ಯಕ್ರಮ ಯಶಸ್ಸು ಕಂಡಿತ್ತು. ಅದರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದರು ಎಂದರು.
ಡಾ.ಪ್ರಕಾಶ ಹೊಳೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಹನುಮಂತಪ್ಪ ಮಲಗುಂದ, ರೇಖಾ ಶೆಟ್ಟರ್, ರವಿಚಂದ್ರ ಪುರೋಹಿತ, ದುಶ್ಯಂತ ನಾಗರೊಳ್ಳಿ, ಅಶೋಕ ಪಾಗದ, ಮಹಮ್ಮದ ಸಾಧಿಕ್ ಬಡಗಿ, ಬಿ.ಎಸ್. ಕೂಕನಗೌಡ್ರ ಇದ್ದರು.
ವೈಷ್ಣವಿ ಪುರೋಹಿತ ಹಾಗೂ ಮಾಧುರಿ ದೇಶಪಾಂಡೆ ಪ್ರಾರ್ಥಿಸಿದರು. ಯುವ ಜನೋತ್ಸವದ ಸಂಯೋಜಕ ಪ್ರೊ.ಅಶೋಕ ಪಾಗದ ಸ್ವಾಗತಿಸಿದರು. ಸುಚಿತ್ರಾ ಅಂಬಿಗ ಮತ್ತು ನಾಗರತ್ನಾ ಹೊಸನಗರ ನಿರೂಪಿಸಿದರು. ಶಿಲ್ಪಾ ಟಿ. ವಂದಿಸಿದರು.