

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ಜೀವನ ಎಂದರೆ ತಪಸ್ಸಿದ್ದಂತೆ. ಕಠಿಣ ಪರಿಶ್ರಮದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ. ಈ ಪಯಣದಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ನಿರ್ದಿಷ್ಟ ಗುರಿಯೆಡೆಗೆ ಗಮನಹರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಪಿ. ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನ ಐಎಎಸ್, ಕೆಎಎಸ್, ಬ್ಯಾಂಕಿಂಗ್, ಗ್ರುಪ್-ಸಿ, ಆರ್ಆರ್ಬಿ ಮತ್ತು ಎಸ್ಎಸ್ಸಿ ಕೋರ್ಸ್ಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿಗೆ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕ್ಲಾಸಿಕ್ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಧ್ಯಯನ ಸಾಮಗ್ರಿ ವಿತರಣಾ ಸಮಾರಂಭ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಲಾಸಿಕ್ ಸಂಸ್ಥೆಯಲ್ಲಿ ಉತ್ತಮ ತರಬೇತಿ ಸಿಗಲಿದೆ. ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಆಕರ್ಷಣೆಗೆ ಒಳಗಾಗ ಕಠಿಣ ಪರಿಶ್ರಮದಿಂದ ಗುರಿ ಮುಟ್ಟಲು, ಸಮಯ ಪಾಲನೆ ಮತ್ತು ಶಿಸ್ತು ಮೈಗೂಡಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದರು.
ಗೋಪಾಲಕೃಷ್ಣ ಡಿ. ಮಾತನಾಡಿದರು. ಡಾ. ಪ್ರಮೋದ ಗಾಯಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಉಪ್ಪಾರ ಮಾತನಾಡಿ, ವಯಸ್ಸನ್ನು ನಿರರ್ಥಕವಾಗಿ ಕಳೆಯದೆ ಸಾಧನೆ ಮಾಡಬೇಕು. ಇನ್ನೊಬ್ಬರೊಂದಿಗೆ ಹೋಲಿಕೆ ಮತ್ತು ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.
ಕ್ಲಾಸಿಕ್ ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ. ಸ್ವಾಗತಿಸಿದರು. ದೀಪಕ ಜೋಡಂಗಿ ವಂದಿಸಿದರು.