ಪಶುಪತಿ ಅಶೋಕ ಗಜಪತಿ ರಾಜು ಗೋವಾ ಹೊಸ ಗವರ್ನರ್

26-goa-new governor
Published on

ಪಣಜಿ: ಗೋವಾದ ನೂತನ ರಾಜ್ಯಪಾಲರಾಗಿ ಕೇಂದ್ರ ಮಾಜಿ ಸಚಿವ ಪಶುಪತಿ ಅಶೋಕ ಗಜಪತಿ ರಾಜು ಅವರು ಶನಿವಾರ ಗೋವಾ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ದ್ರೌಪದಿ ಮುಮು ಅವರು 2025ರ ಜುಲೈ 14ರಂದು ದೇಶಾದ್ಯಂತ ಹಲವು ರಾಜ್ಯಪಾಲರ ಬದಲಾವಣೆಯ ಭಾಗವಾಗಿ ಗೋವಾದ ರಾಜ್ಯಪಾಲರನ್ನೂ ಬದಲಾವಣೆ ಮಾಡಿದ್ದರು.

ಗೋವಾ ಮಾಜಿ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ ಅವರಿಂದ ಅಶೋಕ ಗಜಪತಿ ರಾಜು ಅವರು ಗೋವಾದ ರಾಜ್ಯಪಾಲ ಸ್ಥಾನದ ಜವಾಬ್ದಾರಿ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಈ ಹಿಂದೆ ಕೇಂದ್ರ ನಾಗರಿಕ ವಿಮಾನಯಾನ ಮಂತ್ರಿಯಾಗಿ ಮತ್ತು ಆಂಧ್ರಪ್ರದೇಶದ ರಾಜಕೀಯದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.

ಗೋವಾ ರಾಜಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ಪೀಠದ ನ್ಯಾಯಮೂರ್ತಿಗಳು, ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯಾಧೀಶರು ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ನೂತನ ರಾಜ್ಯಪಾಲ ಅಶೋಕ ಗಜಪತಿ ರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಗೋವಾದಲ್ಲಿರುವುದಕ್ಕೆ ಹಾಗೂ ಗೋವಾ ರಾಜ್ಯದ ಜನತೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಂತೋಷವಾಗುತ್ತದೆ. ನನಗೆ ಗೋವಾದ ಸ್ಥಳೀಯ ಭಾಷೆ ತಿಳಿದಿಲ್ಲ. ಆದರೆ, ನನಗೆ ಹೆಚ್ಚಿನ ಅನುಭವವಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಅಗತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net