

ಕೆ.ಆರ್.ನಗರ: ಪಟ್ಟಣದ ಹೊರವಲಯದ ಚಾಮರಾಜ ಬಲದಂಡೆ ನಾಲೆಯ ಕಾಲುವೆ ಏರಿ ಕಸ ಸಂಗ್ರಹಣ ಜಾಗವಾಗಿ ಮಾರ್ಪಟ್ಟಿದ್ದು, ಕಸವನ್ನು ತೆರವು ಮಾಡುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರು ಮತ್ತು ಸ್ಥಳೀಯ ರೈತರನ್ನು ಕಾಡುತ್ತಿದೆ.
ಪಟ್ಟಣದ ಎಸ್‌ಸಿವಿಡಿಎಸ್ ಚಿತ್ರಮಂದಿರ ಸಮೀಪವಿರುವ ಚಾಮರಾಜ ಬಲದಂಡೆ ನಾಲೆಯ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿಯ(ಅಂಡರ್ ಪಾಸ್) ಮೇಲ್ಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದ್ದು, ಕೆಳಭಾಗದಲ್ಲಿ ರೈಲ್ವೆ ರಸ್ತೆ ಹಾಗೂ ಅದರ ಕೆಳಭಾಗದಲ್ಲಿ ಹಾರಂಗಿ ನಾಲೆಯ ನೀರು ಹಾದು ಹೋಗಲಿದೆ. ಇವರೆಡೂ ಒಂದೇ ಸ್ಥಳದಲ್ಲಿ ಇರುವುದರಿಂದ ವಿಶೇಷ ಸ್ಥಳವಾಗಿದೆ.
ಈ ಸ್ಥಳದಲ್ಲಿ ಕಾಲುವೆ ನೀರು ಕೆಳಭಾಗದಿಂದ ಮೇಲ್ಮುಖವಾಗಿ ಹರಿದು ಹೋಗುವುದರಿಂದ ಹಾಗೂ ರೈಲ್ವೆ ರಸ್ತೆ ಇರುವುದರಿಂದ ನಾಲೆಗೆ ಬೃಹತ್ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಕಾಲುವೆ ನೀರಿನಲ್ಲಿ ತೇಲು ಬರುವ ಕಸ ಕಡ್ಡಿಗಳು, ಪ್ರಾಣಿಗಳ ಮೃತದೇಹಗಳು, ಮನುಷ್ಯರ ಮೃತದೇಹಗಳು ಇಲ್ಲಿ ಸಿಕ್ಕಿಹಾಕಿಕೊಳ್ಳುವುದು ಸಹಜವಾಗಿದೆ. ಇಂತಹ ಸಂದರ್ಭದಲ್ಲಿ ಮೃತದೇಹಗಳ ಪತ್ತೆಗಾಗಿ ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಶೇಖರಣೆಯಾದ ಕಸವನ್ನು ತೆಗೆದು ಪಕ್ಕದಲ್ಲಿರುವ ದಡದಲ್ಲಿ ಇರಿಸಲಾಗಿದೆ. ಇದರಿಂದಾಗಿ ಆ ಸ್ಥಳದಲ್ಲಿ ಸಾಕಷ್ಟು ಕಸದ ರಾಶಿ ನಿರ್ಮಾಣವಾಗಿದೆ. ಅಲ್ಲದೆ ಮಳೆಗಾಲದ ಸಂದರ್ಭದಲ್ಲಿ ಮತ್ತೆ ಇಳಿಜಾರು ಮೂಲಕ ಜಾರಿಕೊಂಡು ನಾಲೆಯೊಳಗೆ ಕಸ ಬೀಳುತ್ತಿದ್ದು, ಇದರಿಂದಾಗಿ ಕಸದ ಸಮಸ್ಯೆ ಕಾಡುವ ಜತೆಗೆ ಮೃತದೇಹಗಳ ಪತ್ತೆಗೆ ತೊಂದರೆಯಾಗುತ್ತಿದೆ.
ಈ ನಡುವೆ ಪಟ್ಟಣದ ಕೆಲವು ಮಾಂಸದಂಗಡಿ, ಕೋಳಿ ಅಂಗಡಿಗಳವರು ಶೇಖರಣೆಯಾದ ತ್ಯಾಜ್ಯವನ್ನು ತಂದು ನಾಲೆಯ ಏರಿಯ ಮೇಲೆ ಹಾಗೂ ಕೆಲವು ಗುಜುರಿ ಅಂಗಡಿಯವರು ಅನುಪಯುಕ್ತ ವಸ್ತುಗಳು ಹಾಗೂ ವೈರುಗಳನ್ನು ಇಲ್ಲಿ ತಂದು ಸುಟ್ಟು ಹಾಕಿದ ಬಳಿಕ ಅವಶೇಷಗಳನ್ನು ಅಲ್ಲೇ ಬಿಡುತ್ತಿದ್ದಾರೆ. ಅಲ್ಲದೆ ಈ ಏರಿ ಮೇಲೆ ಸತ್ತಪ್ರಾಣಿಗಳನ್ನು ತಂದು ಬಿಸಾಡುವುದರಿಂದ ಈ ಭಾಗದ ಕಾಲುವೆ ಏರಿಗಳು ಸಂಪೂರ್ಣವಾಗಿ ಕಸದಿಂದ ಆವೃತಗೊಂಡಿದೆ.
ಈ ಸ್ಥಳದಲ್ಲಿ ಪ್ರತಿ ದಿನ ನೂರಾರು ರೈತರು ತಮ್ಮ ಜಮೀನಿಗೆ ತೆರಳಬೇಕಾಗಿದ್ದು, ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಸದಿಂದಾಗಿ ದುರ್ವಾಸನೆ ಬೀರುವ ಜತೆಗೆ ಏರಿ ಗುಂಡಿ ಬಿದ್ದು ನೀರು ನಿಂತುಕೊಂಡು ರಸ್ತೆಯೇ ಕಾಣದಾಗಿದೆ. ಜತೆಗೆ ಇಲ್ಲಿ ಸಂಚರಿಸುವವರು ಪ್ರತಿ ದಿನ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ದುಸ್ಥಿತಿ ಇದೆ. ಪರಿಣಾಮ ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಪ್ರಕ್ರಿಯೆಯನ್ನು ತಡೆಗಟ್ಟುವವರು ಅಥವಾ ಕಸವನ್ನು ತೆರವುಗೊಳಿಸುವವರು ಯಾರೂ ಇಲ್ಲ. ಇಲ್ಲಿ ಯಾರು ಕಸ ಹಾಕದಂತೆ ಕ್ರಮ ಕೈಗೊಳ್ಳಬೇಕಾದದ್ದು ನೀರಾವರಿ ಇಲಾಖೆಯೇ ಅಥವಾ ಪಟ್ಟಣದ ಪುರಸಭೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ನಡುವೆ ಈ ವಿಚಾರವಾಗಿ ಇವರು ಅವರ ಮೇಲೆ ಅವರು ಇವರ ಮೇಲೆ ಹೇಳಿಕೊಂಡು ಸಾರ್ವಜನಿಕ ಸಮಸ್ಯೆಯನ್ನು ಬಗೆಹರಿಸದೆ ಪ್ರಶ್ನೆಯಾಗಿಯೇ ಉಳಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಇಲ್ಲಿನ ಕಸದ ರಾಶಿಯನ್ನು ತೆರೆವುಗೊಳಿಸಿ ರೈತರು , ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂಬುದು ಸಾರ್ವಜನಿಕರ ಆಗ್ರಹ.
ಈ ಸ್ಥಳದಲ್ಲಿ ಕಸದ ರಾಶಿ ಎಷ್ಟಿದೆ ಎಂದರೆ ರಸ್ತೆಯಲ್ಲಿ ಸಂಚರಿಸುವವರಿಗೆ ಮಾತ್ರ ಗೊತ್ತು. ಹಲವಾರು ವರ್ಷಗಳಿಂದ ಇಲ್ಲಿ ಶೇಖರಣೆಯಾಗಿರುವ ಕಸವನ್ನು ಯಾರೂ ತೆರವುಗೊಳಿಸದಿರುವುದರಿಂದ ಸುತ್ತಮುತ್ತಲಿನ ಪ್ರದೇಶ ಗಬ್ಬು ನಾರುತ್ತಿದೆ. ಸಂಬಂಧಟಪಟ್ಟ ಇಲಾಖೆಯವರು ಆದಷ್ಟು ಬೇಗ ಶೇಖರಣೆಯಾಗಿರುವ ಕಸವನ್ನು ತೆರವುಗೊಳಿಸುವ ಜತೆಗೆ ಮತ್ಯಾರು ಅಲ್ಲಿಗೆ ಕಸ, ಕೋಳಿ ಅಂಗಡಿ ತ್ಯಾಜ್ಯ, ಸತ್ತ ಪ್ರಾಣಿಗಳನ್ನು ತಂದು ಹಾಕದಂತೆ ಕ್ರಮವಹಿಸಬೇಕು. ಆ ಮೂಲಕ ಸಾರ್ವಜನಿಕರು ಮತ್ತು ರೈತರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
ರಾಮಕೃಷ್ಣೇಗೌಡ್ರು ಹಿರಿಯ ನಾಗರಿಕ