ಮೀಸಲು ವಿರೋಧಿಸಿ ಕೋರ್ಟ್ ಮೊರೆ!

111111
Published on

ವಿಜಯಪುರ: ದೇವನಹಳ್ಳಿ ತಾಲೂಕು ವಿಜಯಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಿಗದಿ ಮಾಡಿರುವ ಮೀಸಲಾತಿಗೆ ಅಸಮಾಧಾನಗೊಂಡ ಕೆಲ ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಚುನಾಯಿತ ಪ್ರತಿನಿಧಿಗಳಿಗಿಂತ ಆಡಳಿತ ಅಧಿಕಾರಿಗಳು ಅಧಿಕಾರ ನಡೆಸಿರುವುದೇ ಹೆಚ್ಚಾಗಿದೆ. 2013ರಲ್ಲಿ ಅನಸೂಯಮ್ಮ ಸಂಪತ್ ಕುಮಾರ್ ಅಧ್ಯಕ್ಷರಾದ ನಂತರ 2015ರಲ್ಲಿ ಮತ್ತೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಬೇಕಿತ್ತು. ಆ ಸಂದರ್ಭದಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋದ ಕಾರಣ 2015ರಿಂದ 2018ರವರೆಗೆ ಅಧಿಕಾರಿಗಳೇ ಆಡಳಿತ ನಡೆಸಿದರು.

ನಂತರ ಪುರಸಭೆ ಚುನಾವಣೆ 2019ರಲ್ಲಿ ನಡೆಯಬೇಕಾಗಿತ್ತು. ಆಗಲೂ ಸರ್ಕಾರ 23 ವಾರ್ಡ್‌ಗಳಿಗೆ ಘೋಷಿಸಿದ ಮೀಸಲಾತಿ ವಿರುದ್ಧ ಕೆಲವರು ಕೋರ್ಟ್ ಮೊರೆ ಹೋದರು. ಆಗಲೂ 2019ರಿಂದ 2021ರವರೆಗೂ ಪುರಸಭೆಯಲ್ಲಿ ಆಡಳಿತಾಧಿಕಾರಿಗಳ ಆಡಳಿತವೇ ನಡೆಯಿತು.

ನಂತರ 2021ರ ಮೇ ನಲ್ಲಿ ಪುರಸಭೆಯ 23 ವಾರ್ಡ್‌ಗಳಿಗೂ ಚುನಾವಣೆ ನಡೆದ ಬಳಿಕ ಅಕ್ಟೋಬರ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ಅಧ್ಯಕ್ಷರಾಗಿ ಜೆಡಿಎಸ್‌ನ ರಾಜೇಶ್ವರಿ ಭಾಸ್ಕರ್ ಹಾಗೂ ಉಪಾಧ್ಯಕ್ಷರಾಗಿ ಎಂ.ಕೇಶವಪ್ಪ ಆಯ್ಕೆಯಾದರು. ನಂತರ ವಿಮಲಾ ಬಸವರಾಜು ಅಧ್ಯಕ್ಷರಾಗಿದ್ದರು. 2024ರ ಫೆಬ್ರವರಿಗೆ ಅವಧಿ ಮುಗಿಯಿತು. ನಂತರ ಸರ್ಕಾರ, ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೆ ಎಂದು ಮೀಸಲು ನಿಗದಿಯಾಗಿದೆ. ಇದರ ವಿರುದ್ಧ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಸೆ.27ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದೆಯಾದರೂ ಯಾವುದೇ ತಡೆಯಾಜ್ಞೆ ಇಲ್ಲ.

ಇಂತಹ ಸಮಯದಲ್ಲಿ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಬಹುದಿತ್ತು. ಆದರೆ, ಕಾಂಗ್ರೆಸ್‌ಗೆ ಈ ಬಗ್ಗೆ ಆಸಕ್ತಿ ಇಲ್ಲ. ಜತೆಗೆ ಪುರಸಭೆಯಲ್ಲಿ ಜೆಡಿಎಸ್ ಸದಸ್ಯರ ಬಹುಮತ ಇರುವ ಕಾರಣ ವೇಳಾಪಟ್ಟಿ ಪ್ರಕಟಿಸಿಲ್ಲ ಎಂಬುದು ಕೆಲ ಜೆಡಿಎಸ್ ಸದಸ್ಯರ ವಾದವಾಗಿದೆ.

ಮತದಾರರಿಗೆ ಬೇರೆ ದಾರಿ ಇಲ್ಲ

2013 ಹಾಗೂ 2018ರವರೆಗಿನ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಬೆಂಬಲಿತರು 23 ಸದಸ್ಯರಲ್ಲಿ 21 ಮಂದಿ ಆಯ್ಕೆಯಾಗಿದ್ದರೂ ಗುಂಪುಗಾರಿಕೆಯಿಂದಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಕಾರಣದಿಂದಾಗಿ 2021ರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ, ಆ ಪಕ್ಷಕ್ಕೆ 13 ಮಂದಿ ಸದಸ್ಯರನ್ನು ಆಯ್ಕೆ ಮಾಡಿ ಬಹುಮತ ನೀಡಿದ್ದಾರೆ.

ಕಾಂಗ್ರೆಸ್‌ನಿಂದ ಏಳು ಸದಸ್ಯರಿದ್ದಾರೆ. ಆದರೆ, ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ಸದಸ್ಯರು ನ್ಯಾಯಾಲಯದ ಮೊರೆ ಹೋಗಿರುವುದು ಜನರಲ್ಲಿ ಗೊಂದಲ ತಂದಿಟ್ಟಿದೆ.

ಎಂಎಲ್‌ಸಿ ವೋಟು ತೀರ್ಮಾನ ಆಗಿಲ್ಲ

ಪುರಸಭೆಯ 23 ಸದಸ್ಯರ ಪೈಕಿ 13 ಮಂದಿ ಜೆಡಿಎಸ್ ಸದಸ್ಯರು, 7 ಮಂದಿ ಕಾಂಗ್ರೆಸ್ ಸದಸ್ಯರು, ಇಬ್ಬರು ಕಾಂಗ್ರೆಸ್ ಬೆಂಬಲಿತ ಪಕ್ಷೇತರರು, ಒಬ್ಬರು ಬಿಜೆಪಿ ಸದಸ್ಯರು ಇದ್ದು, ಇದರೊಂದಿಗೆ ಬಿಜೆಪಿ ಸಂಸದರು, ಕಾಂಗ್ರೆಸ್ ಶಾಸಕರು ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net