

ಚಿಕ್ಕಮಗಳೂರು: ಕಸಾಯಿಖಾನೆಗೆ ಜಾನುವಾರು ಸಾಗಿಸುವುದನ್ನು ತಪ್ಪಿಸುವ ಸಲುವಾಗಿ ಪ್ರತಿ ತಾಲೂಕಿನಲ್ಲಿ ಎರಡು ಗೋಶಾಲೆ ತೆರೆಯಲಿದ್ದು, ಸೂಕ್ತ ಜಾಗ ಗುರುತಿಸುವಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಸಂಬಂಧ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಚಿವರು, `ಗೋಮಾತೆ ನನ್ನ ಮಾತೆ' ಎಂಬ ಘೋಷವಾಕ್ಯ ಹೊಂದಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ಬಂದಿದೆ. ಗೋವುಗಳನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕೆಂಬುದು ಮುಖ್ಯ. ಇಲಾಖೆ ಅಧಿಕಾರಿಗಳು, ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ದೂರು ಬಂದಲ್ಲಿ ಕ್ರಮದ ಎಚ್ಚರಿಕೆ:
ಮೂಡಿಗೆರೆ ಮತ್ತು ಶೃಂಗೇರಿ ತಾಲೂಕಿನಲ್ಲಿ ಪಶು ವೈದ್ಯರು ಗ್ರಾಮಗಳಿಗೆ ತೆರಳುತ್ತಿಲ್ಲ. ದೂರವಾಣಿ ಕರೆ ಮಾಡಿದರೆ ಸ್ವಿಚ್ ಆಫ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೂರು ಬರಬಾರದು. ಒಂದು ವೇಳೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಚಿಕಿತ್ಸೆ ಸಲುವಾಗಿ ಆಸ್ಪತ್ರೆಗೆ ಜಾನುವಾರುಗಳನ್ನು ಕರೆತಂದರೆ ಔಷಧ ತರಲು ಚೀಟಿ ಬರೆದುಕೊಡಲಾಗುತ್ತಿದ್ದು, ಈ ಕ್ರಮವೂ ನಿಲ್ಲಬೇಕು. ಇಲಾಖೆಯಲ್ಲಿ ಔಷಧ ಕೊರತೆ ಇಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಶೇ.50 ಹುದ್ದೆಗಳು ಖಾಲಿ ಇದ್ದು, 600 ಪಶುವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ ಒಟ್ಟು 30 ಪಶು ಆಂಬುಲೆನ್ಸ್ ನೀಡುವ ಗುರಿ ಹೊಂದಿದ್ದು, ಈಗಾಗಲೇ 15 ಆಂಬುಲೆನ್ಸ್ ಒದಗಿಸಲಾಗಿದೆ. ಪ್ರಸ್ತಾವನೆ ಬಂದ ಕೂಡಲೇ ಈ ಜಿಲ್ಲೆಗೂ ಪಶು ಆಂಬುಲೆನ್ಸ್ ಅ ನೀಡಲಾಗುವುದು. ಈ ಬಗ್ಗೆ ತಕ್ಷಣ ಗಮನ ಹರಿಸುವಂತೆ ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಜಾಗ ನೀಡಿದರೆ ಗೋಸದನ:
ಜಿಲ್ಲೆಯಲ್ಲಿ ಜಾಗ ಒದಗಿಸಿದರೆ ಗೋ ಸದನ ಮಂಜೂರು ಮಾಡಲಾಗುವುದು ಎಂದು ಸಚಿವರು ತಿಳಿಸಿದಾಗ, ಕಡೂರು ಪಟ್ಟಣ ಸಮೀಪ 11 ಎಕರೆ ಜಾಗ ಗುರುತಿಸಲಾಗಿದ್ದು, ಅಲ್ಲಿ ಗೋ ಸದನ ನಿರ್ಮಿಸಲು ಅವಕಾಶವಿದೆ ಎಂದು ಕಡೂರು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಬಿ.ಉಮೇಶ್ ಸಲಹೆ ನೀಡಿದರು.
ರಾಜ್ಯದಲ್ಲಿ ಜಿಲ್ಲೆಗೆ 6ನೇ ಸ್ಥಾನ:
ಜಿಲ್ಲೆಯಲ್ಲಿ 1 ಪಾಲಿ ಕ್ಲಿನಿಕ್, 25 ಪಶು ಆಸ್ಪತ್ರೆ, 71 ಪಶು ಚಿಕಿತ್ಸಾಲಯ, 39 ಪ್ರಾಥಮಿಕ ಪಶು ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಉತ್ತಮ ಕಾರ್ಯನಿರ್ವಹಣೆಯ 6ನೇ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಉಪ ನಿರ್ದೇಶಕ ಡಾ.ಪ್ರಕಾಶ್ ಮಾಹಿತಿ ನೀಡಿದರು.
ರಾಜ್ಯ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ನಿರ್ದೇಶಕ ದೀಪಕ್ ದೊಡ್ಡಯ್ಯ ಮಾತನಾಡಿ, ಅಮೃತ್‍ಮಹಲ್ ತಳಿ ಸಂವರ್ಧನಾ ಕೇಂದ್ರದ ನಿರ್ವಹಣೆಯನ್ನು ತಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಸ್ಪಿ ಎಂ.ಎಚ್.ಅಕ್ಷಯ್, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಸಭೆಯಲ್ಲಿದ್ದರು.
ಗೋಹತ್ಯೆ ಮಾಡಿದರೆ ಜೈಲಿಗೆ:
ಅನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಗೋಹತ್ಯಾ ಕೇಂದ್ರಗಳು ಎಲ್ಲಿಯಾದರೂ ಇದ್ದಲ್ಲಿ, ಜಾನುವಾರು ಕಳವು ಅಥವಾ ಅಕ್ರಮ ಸಾಗಣೆ ಕಂಡುಬಂದಲ್ಲಿ ಪೊಲೀಸ್ ಇಲಾಖೆ ಗಮನಕ್ಕೆ ತರುವಂತೆ ತಿಳಿಸಿದರು. ಜಾನುವಾರುಗಳನ್ನು ಅಕ್ರಮವಾಗಿ ಹತ್ಯೆ ಮಾಡಿದರೆ 1964ರಲ್ಲಿ ಜಾರಿಗೆ ಬಂದ ಕಾನೂನು ಪ್ರಕಾರ 1 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ಈಗ ಹೊಸ ವಿಧೇಯಕ ತಂದ ಬಳಿಕ 50 ಸಾವಿರದಿಂದ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು.
3 ರಿ0ದ 7 ವರ್ಷದವರೆಗೆ ಸಜೆ:
ಈ ಮೊದಲು ಗೋಹತ್ಯೆಗೆ 6 ತಿಂಗಳ ಶಿಕ್ಷೆ ವಿಧಿಸಲಾಗುತ್ತಿತ್ತು. ಈಗ 3 ವರ್ಷದಿಂದ 7 ವರ್ಷದವರೆಗೆ ಸಜೆ ವಿಧಿಸಲಾಗುವುದು. ಮೊದಲು ನ್ಯಾಯಾಲಯಗಳಲ್ಲಿ 10 ವರ್ಷಗಳವರೆಗೆ ಪ್ರಕರಣಗಳು ಬಾಕಿ ಇರುತ್ತಿದ್ದವು. ಇದಕ್ಕಾಗಿ ವಿಶೇಷ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಧೀಶರನ್ನು ನೇಮಿಸಿ ಎರಡು ವರ್ಷದೊಳಗಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.