

ಬಾಗಲಕೋಟೆ: ಭಾರತೀಯ ಪ್ರಾದೇಶಿಕ ಗೋವು ತಳಿಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಶೋಧನೆಗಾಗಿ ಜೂ.3 ಮತ್ತು 4 ರಂದು ಗೋ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಂಚಗವ್ಯ ಡಾಕ್ಟರ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಎಸ್.ಎಂ.ಕುರುಬರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾರ್ಯಕ್ರಮವನ್ನು ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಜೂ.3 ರಂದು ಬೆಳಗ್ಗೆ 11 ರಿಂದ ಕಾರ್ಯಕ್ರಮವನ್ನು ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ. ಪ್ರಾದೇಶಿಕ ಗೋವು ತಳಿಗಳ ಪ್ರದರ್ಶನ, ಗೋವು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಪಂಚಗವ್ಯ ಕುರಿತ ವಿಚಾರ ಸಂಕಿರಣಗಳು, ಪಂಚಗವ್ಯ ಚಿಕಿತ್ಸಾ ವಿಧಾನ ಕುರಿತು ಸಲಹಾ ಶಿಬಿರಗಳು ಗೋ ಸಂರಕ್ಷಣಾ ತಜ್ಞರಿಂದ ನಡೆಯಲಿವೆ ಎಂದರು.
ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೆ ಗೋ ಉತ್ಪನ್ನಗಳ ತಯಾರಿಕಾ ಪ್ರಾತ್ಯಕ್ಷಿತೆ ಹಾಗೂ ಸಂಜೆ 6.30 ರಿಂದ ವೇದೋಕ್ತ ಮಂತ್ರಗಳೊಂದಿಗೆ ಮತ್ತು ಗೋಮಯ ದೀಪಗಳೊಂದಿಗೆ ಮಾತೆಯರಿಂದ ಗೋಮಾತಾ ಪೂಜಾ ಮತ್ತು ಆರತಿ ಕಾರ್ಯಕ್ರಮ ನಡೆಯಲಿದ್ದು, ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ಮಹಾಲಿಂಗಪುರದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಯಲಬುರ್ಗಿಯ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೀಳಗಿಯ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಟೀಕಿನಮಠದ ಮಲ್ಲಿಕಾರ್ಜುನ ದೇವರು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ವಿಶ್ವ ಹಿಂದು ಪರಿಷತ್ ಸಂಪರ್ಕ ಪ್ರಮುಖರಾದ ಮಂಜುನಾಥ, ಗೋಮಾತಾ ಸಹಕಾರ ಸಂಘದ ಅಧ್ಯಕ್ಷ ಡಾ.ಜೀವನ್ ಕುಮಾರ ವಿ., ಗೋಸೇವಾ ಗತಿ ವಿಧಿ ಪ್ರಾಂತ ಸಂಯೋಜಕ ರಾಮಕೃಷ್ಣ ಬುದ್ನಿ, ಪಂಚಗವ್ಯ ಚಿಕಿತ್ಸೆಯ ಪಾರಂಪರಿಕ ವೈದ್ಯ ಹನುಮಂತ ಮಳಲಿ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ. ತಮಿಳುನಾಡಿನ ಪಂಚಗವ್ಯ ವಿದ್ಯಾಪೀಠ ಮತ್ತು ಗುರುಕುಲಮ್ ಸಂಸ್ಥಾಪಕ ಗುರೂಜಿ ಡಾ.ನಿರಂಜನ್ ವರ್ಮ ಗೋವಿನ ಉತ್ಪನ್ನಗಳು ಮತ್ತು ಮನುಷ್ಯನ ಆರೋಗ್ಯಕ್ಕೆ ಪಂಚಗವ್ಯ ಚಿಕಿತ್ಸೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಜೂ.4 ರಂದು ಬೆಳಗ್ಗೆ 10.30 ಗಂಟೆಗೆ ಗೋ ಆಧಾರಿತ ಕೃಷಿ ಪದ್ಧತಿ ಬಗ್ಗೆ ವಿಜಯಪುರದ ಗೋ ಆಧಾರಿತ ಕೃಷಿಕ ತುಕಾರಂ ಪವಾರ್ ಹಾಗೂ ಮಧ್ಯಾಹ್ನ 12 ಗಂಟೆಗೆ ಗೋ ಮಾತಾ ಸಹಕಾರ ಸಂಘದ ಅಧ್ಯಕ್ಷ ಡಾ.ಜೀವನ ಕುಮಾರ ಅವರು ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪದ ವೈಜ್ಞಾನಿಕ ವಿಶ್ಲೇಷಣೆ ಮಾಡಲಿದ್ದಾರೆ. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ.ಜೀವನ್‌ಕುಮಾರ, ಮುರುಗೇಶ ಕುಂದರಗಿ, ಶಶಿಶೇಖರ, ವಿಜಯಕುಮಾರ ಉಪಸ್ಥಿತರಿದ್ದರು.