ಪ್ರೊ.ಎಲ್​.ಎಸ್​.ಶೇಷಗಿರಿರಾವ್​ ಕನ್ನಡ ವಿಮರ್ಷಾ ಸೀಮೆಯ ವಜ್ರ: ನಾಡೋಜ ಗೊ.ರು. ಚನ್ನಬಸಪಪ್ಪ ಬಣ್ಣನೆ

LSS
Published on

ಬೆಂಗಳೂರು: ಸಾಹಿತ್ಯ ಸಂಶೋಧನೆ, ಸಂಪಾದನೆ, ಅನುವಾದ, ವಿಮರ್ಶೆ ಕ್ಷೇತ್ರಗಳಲ್ಲದೆ, ನಾಡು-ನುಡಿಗಳ ಹಿತರಕ್ಷಣೆಗಾಗಿ ಪ್ರೊ.ಎಲ್​.ಎಸ್​.ಶೇಷಗಿರಿರಾವ್​ ಸಾಕಷ್ಟು ದುಡಿದಿದ್ದಾರೆ ಎಂದು ಹಿರಿಯ ಸಾಹಿತಿ ಗೊ.ರು. ಚನ್ನಬಸಪಪ್ಪ ಹೇಳಿದ್ದಾರೆ.

ಉದಯಬಾನು ಕಲಾಸಂಘ ಕನ್ನಡ ಗೆಳೆಯರ ಬಳಗದಿಂದ ನಗರದ ಉದಯಬಾನು ಕಲಾಸಂಘದ ಸಭಾಗಂಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ.ಎಲ್​.ಎಸ್​. ಶೇಷಗಿರಿರಾವ್​ ಶತಮಾನೋತ್ಸವದ ಮಾಸದ ಮಾತಿಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ವಿಮರ್ಶೆ ಸೀಮೆಯ ವಜ್ರ ಎನಿಸಿದ್ದ ಅವರು, ಕನ್ನಡದ ಸತ್ವ-ಸೌಂದರ್ಯಗಳನ್ನು ಇಂಗ್ಲೀಷ್​ ಓದುಗರಿಗೂ, ಇಂಗ್ಲಿಷ್​ ಸಾಹಿತ್ಯದ ಸತ್ವ-ಸೌಂದರ್ಯವನ್ನು ಕನ್ನಡ ಓದುಗರಿಗೂ ಪರಿಚಯಿಸಲು ಮಾಡಿದ ಅನುವಾದ ಕಾರ್ಯ, ಭಾಷಾ ಸಾಹಿತ್ಯದ ವಿಮರ್ಶೆ, ವಿಶ್ಲೇಷಣೆಗಳು ಮಹತ್ವದ್ದಾಗಿವೆ. ಹೀಗಾಗಿ ಕನ್ನಡ ಮತ್ತು ಇಂಗ್ಲೀಷ್​ ವಿದ್ವತ್​ ವಲಯಗಳಲ್ಲಿ ಗೌರವದ ಸ್ಥಾನ ಪಡೆದಿದ್ದಾರೆ ಎಂದರು.

ಎಲ್​.ಎಸ್​.ಎಸ್​. ಅವರ ಅಧ್ಯಯನ-ಅಭಿವ್ಯಕ್ತಿ ಎರಡೂ ಗಂಭೀರವಾಗಿತ್ತು. ಅವರು ಗ್ರಂಥಗಳನ್ನು ಓದುವಾಗ ಅದರಲ್ಲಿ ಬರುವ ಅಗೋಚರ ವ್ಯಕ್ತಗಳೊಡನೆ ಅನುಸಂದಾನ ನಡೆಸುತ್ತಿದ್ದರು. ಅದರಿಂದಾಗಿಯೇ ಅವರ ಮಾತು-ಬರಹಗಳಲ್ಲಿ ಅಂತಃಸತ್ವ ತುಂಬಿಕೊಂಡಿರುವುದು ಎಂದು ತಿಳಿಸಿದರು.

ಆದಿಚುಂಚನಗರಿ ವಿ.ವಿ. ಪ್ರಾಧ್ಯಾಪಕ ಡಾ. ಟಿ.ಎನ್​. ವಾಸುದೇವಮೂರ್ತಿ ಮಾತನಾಡಿ, ಕನ್ನಡ ವಿಮರ್ಶೆಗೆ ಎಲ್​.ಎಸ್​.ಎಸ್​ ಅವರು ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ, ಸ್ತ್ರೀ ಸಂವೇದನೆಗೆ ಸಾಕ್ಷಿಯಾಗಿ, ಈ ಎಲ್ಲ ಪಂಥಗಳ ವಿಮರ್ಶೆಯನ್ನು ನಿರ್ಲಿಪ್ತತೆಯಿಂದ ಮಾಡಿದ್ದಾರೆ. ಅವರು ಬರವಣಿಗೆಯಲ್ಲಿ ಮೂಲ ಆಕರಗಳನ್ನು ನೇರವಾಗಿ ಹೇಳುತ್ತಿದ್ದರು. ಎರವಲು ಪಡೆದಿದ್ದನ್ನು ಎಂದೂ ತನ್ನದೆಂದು ಹೇಳಿದವರಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net