ಇನ್ನೊಬ್ಬರ ಬಗ್ಗೆ ಕೊರಗದೆ ಬದುಕು ನಡೆಸಿ: ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಕಿವಿಮಾತು

Go.Ru.Cha award ceremony Mandya
Published on

ಮಂಡ್ಯ: ಸಮಾಜದಲ್ಲಿ ಬೇರೊಬ್ಬರ ಮನಸ್ಸಿಗೆ ನೋವುಂಟು ಮಾಡದೇ ಹಾಗೂ ಅಸೂಯೆ ಪಡದೇ ತಮ್ಮ ಪಾಲಿಗೆ ಬಂದ ಜೀವನವನ್ನು ಖುಷಿಯಾಗಿ ನಡೆಸುವವರು ಶ್ರೀಮಂತರು. ಅದೇ ಇನ್ನೊಬ್ಬರನ್ನು ನೋಡಿ ಕೊರಗುವವರು ಬಡವರು ಎಂದು ಬೇಬಿ ಮತ್ತು ಚಂದ್ರವನ ಆಶ್ರಮ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದ ಪೀಠಾಧಿಪತಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ಮಂಡ್ಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಗೊ.ರು.ಚ(ಗೊ.ರು.ಚನ್ನಬಸಪ್ಪ) ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿ, ಗೊ.ರು.ಚನ್ನಬಸಪ್ಪ ಅವರು ಒಬ್ಬ ವ್ಯಕ್ತಿ ಎಷ್ಟು ಎತ್ತರಕ್ಕೆ ಏರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರು ನಮ್ಮ ಸಮಾಜದ ಉತ್ಸಾಹದ ಪ್ರತಿನಿಧಿ. 1992-94ರ ಅವಧಿಯಲ್ಲಿ ಅಮೃತ ನಿಧಿ ಯೋಜನೆ ರೂಪಿಸಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಬೆಳೆಸಿದ ರೀತಿ ಅನನ್ಯವಾದುದು ಎಂದು ಬಣ್ಣಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಸಂಧ್ಯಾರೆಡ್ಡಿ, ಗೊ.ರು. ಚನ್ನಬಸಪ್ಪ ಜನಪದ ಕಲೆಗಳ ಬಗ್ಗೆ ಅಪಾರ ಅಭಿಮಾನ ಹೊಂದಿ ಅವರು ಹೊರತಂದ ಜನಪದ ಕಲೆಗಳು ಪುಸ್ತಕ ಮತ್ತು ಜಾನಪದ ವಿವಿಯನ್ನು ಸ್ಥಾಪನೆ ಮಾಡಿದ್ದು ಇಂದಿಗೂ ಮಾದರಿಯಾಗಿದೆ. ಅವರ ಸರಳ ನಡೆ-ನುಡಿ ಆದರ್ಶ ಸಮಾಜಕ್ಕೆ ಮಾದರಿ. ಜಾನಪದವನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ನಾಡೋಜ ಡಾ.ಗೊ.ರು.ಚನ್ನಬಸಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಕೆ.ಎಸ್.ಷಡಕ್ಷರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net