

ಮೈಸೂರು: ಮಂಡ್ಯದಲ್ಲಿ ಹಮ್ಮಿಕೊಂಡಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲು ನನಗೆ ಅವಕಾಶ ದೊರೆತ್ತಿರುವುದು ನನ್ನ ಅದೃಷ್ಟ ಎಂದು ಸಾಹಿತಿ ಡಾ.ಗೊ.ರು. ಚನ್ನಬಸಪ್ಪ ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ನಗರ ಘಟಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟ ವತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ‘ಶರಣ ದರ್ಶನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ನನ್ನನ್ನು ಅಖಿಲ ಭಾರತ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ನೋಡಿ ನಾನು ಬೆರಗಾಗಿದ್ದೇನೆ. ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ, ಹರಿದ ಚಾಪೆಯ ಮೇಲೆ ಕಂಬಳಿ ಹೊದ್ದು ಮಲಗುತ್ತಿದ್ದ, ಅರೆಹೊಟ್ಟೆ, ಅರೆಮೈನಲ್ಲಿ ಇದ್ದ ಹಾಗೂ ಉನ್ನತ ಶಿಕ್ಷಣ ಪಡೆಯುವ ಅವಕಾಶ ವಂಚಿತನಾದ ಸಾಮಾನ್ಯ ವ್ಯಕ್ತಿಯಾದ ನನಗೆ ಇಂತಹ ಉನ್ನತ ಸ್ಥಾನಮಾನ ದೊರೆತ್ತಿರುವುದು ಸೋಜಿಗ ಎಂದರು.
ಒದಗಿ ಬರುವ ಅವಕಾಶಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ನನ್ನ ತಂದೆ, ತಾಯಿ ಸದಾ ಹೇಳುತ್ತಿದ್ದರು. ತಂದೆ, ತಾಯಿಯ ಮಾತಿನಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನ್ನಂತ ಸಾಮಾನ್ಯ ವ್ಯಕ್ತಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗುವುದು ಒಂದು ಅದೃಷ್ಟ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಳವರಹುಂಡ ಸಿದ್ದಪ್ಪ, ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಯ್ಯ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು.