ಗೋ ರಕ್ಷಣೆ ಎಲ್ಲರ ಹೊಣೆ

11athani_aparaj 01-Web
ಅಥಣಿಯಲ್ಲಿ ಹಮ್ಮಿಕೊಂಡಿದ್ದ ಗೋ ನಾಮಕರಣ ಸಮಾರಂಭದಲ್ಲಿ ಚಿದಾನಂದ ಲಕ್ಷ್ಮಣ ಸವದಿ, ಆನಂದ ಟೋಣಪಿ, ಪ್ರದೀಶ ಜೋಶಿ, ವಸಂತ ಆಚಾರ್ಯ ಬಳ್ಳೂರ, ಕಿರಣ ರಜಫೂತ ಭಾಗವಹಿಸಿದ್ದರು.
Published on

ಅಥಣಿ: ಗೋ ರಕ್ಷಣೆ ಪ್ರತಿಯೊಬ್ಬರ ಹೊಣೆ. ರಾಜ್ಯ ಸರ್ಕಾರ ಗೋ ಸಂರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ ಆರಂಭಿಸುತ್ತಿರುವುದು ಸಂತಸದ ವಿಚಾರ ಎಂದು ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಹೇಳಿದ್ದಾರೆ.

ಪಟ್ಟಣದ ಹೊರವಲಯದ ಗೋದಾಮಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಗೋ ನಾಮಕರಣ’ ಸಮಾರಂಭದಲ್ಲಿ ಮಾತನಾಡಿ, ಜಯರಾಂ ಆಚಾರ್ಯ ಅವರ ನೇತೃತ್ವದಲ್ಲಿ 7 ಜನ ಸೇರಿಕೊಂಡು ಸ್ಥಾಪನೆ ಮಾಡಿರುವ ಈ ಗೋ ಶಾಲೆಯಲ್ಲಿ 30 ಆಕಳುಗಳನ್ನು ಸಂರಕ್ಷಣೆ ಮಾಡುತ್ತಿರುವುದು ಪುಣ್ಯದ ಕಾಯಕವಾಗಿದೆ. ನಿಮ್ಮ ಕಾಯಕದಲ್ಲಿ ನನಗೂ ಅವಕಾಶ ನೀಡಿದರೆ 2 ಗೋ ದತ್ತು ಪಡೆದು ಸಂರಕ್ಷಣೆ ಮಾಡುತ್ತೇನೆ ಎಂದು ಹೇಳಿದ ಅವರು ಗೋ ಶಾಲೆ ನಿರ್ವಹಣೆಗೆ 51 ಸಾವಿರ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು. ಜತೆಗೆ, ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಮೂಲಕ ಈ ಗೋ ಶಾಲೆಗಳ ಅಭಿವೃದ್ಧಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಮುಖಂಡ ಆನಂದ ಟೋಣಪಿ ಮಾತನಾಡಿ, ಮದನಪಲ್ಲಿಯ ಜಯರಾಂ ಆಚಾರ್ಯರ ಮುಂದಾಳತ್ವದಲ್ಲಿ ಹರೀಶ ಶಿರೂರ, ಉದಯ ಭಾಟೆ, ಭಾಗ್ಯಶ್ರೀ ಗುಂಡಾ, ವಾಸು ಕುಲಕರ್ಣಿ 30 ಗೋವುಗಳ ಸೇವೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಸಾರ್ವಜನಿಕರು ಅವರಿಗೆ ಸಾಥ್ ನೀಡಬೇಕು ಎಂದರು. ನಂತರ ಸುಮಂಗಲಿಯರಿಂದ ತೊಟ್ಟಿಲಲ್ಲಿ ಕೃಷ್ಣನನ್ನು ತೂಗುವ ಮೂಲಕ 30 ಗೋವುಗಳಿಗೆ ನಾಮಕರಣ ಮಾಡಲಾಯಿತು. ಪ್ರದೀಪ ಜೋಶಿ, ವಸಂತ ಆಚಾರ್ಯ ಬಳ್ಳೂರ, ಕಿರಣ ರಜಪೂತ, ರವಿ ಬಾಸಿಂಗೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net