

ಮಡಿಕೇರಿ:
ಮಾಲಿನ್ಯ ನಿಯಂತ್ರಣ ಮಂಡಳಿ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಶನಿವಾರ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಜಿಲ್ಲಾಮಟ್ಟದ ಜಾಗೃತಿ ಅಭಿಯಾನ ನಡೆಯಿತು.
ಹಣತೆ ಬೆಳಗಿಸಿ ಹಸಿರು ದೀಪಾವಳಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ ಮಾತನಾಡಿ, ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ತ್ಯಜಿಸಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಮೂಲಕ ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಸರ್ಕಾರ ಆದೇಶಿಸಿದೆ. ಪಟಾಕಿ ಸಿಡಿಸುವುದರಿಂದ ಉಂಟಾಗುವ ಮಾಲಿನ್ಯ ಮತ್ತು ದುಷ್ಪರಿಣಾಮಗಳ ಕುರಿತು ಬೆಳಕು ಚೆಲ್ಲಿ ಸ್ವಚ್ಛ, ಸ್ವಸ್ಥ ಹಾಗೂ ಹಸಿರು ದೀಪಾವಳಿ ಆಚರಿಸುವ ಮೂಲಕ ಜನರಿಗೆ ಪರಿಸರ ಜಾಗೃತಿ ಮೂಡಿಸಬೇಕು.
ಕೊಡಗಿನಲ್ಲಿ ಕಳೆದ 15 ವರ್ಷಗಳಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಯ ಮಹತ್ವದ ಕುರಿತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಟಾಕಿಗಳನ್ನು ಸಿಡಿಸುತ್ತಿರುವುದು ಕ್ಷೀಣಿಸುತ್ತಿರುವುದು ಕಂಡುಬAದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.\
ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ, ವಾಯು ಮತ್ತು ಜಲ ಮಾಲಿನ್ಯ ಹಾಗೂ ನೆಲ ಮಾಲಿನ್ಯದ ಜತೆಗೆ ಪ್ರಾಣಿ-ಪಕ್ಷಿ ಜೀವ ಸಂಕುಲಗಳು ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಪರಿಸರ ವ್ಯವಸ್ಥೆಗೂ ತೀವ್ರ ಧಕ್ಕೆಯುಂಟಾಗುತ್ತದೆ. ಆದ್ದರಿಂದ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ತ್ಯಜಿಸಿ ಮಾಲಿನ್ಯ ತಡೆಗಟ್ಟುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಈ ಜಾಗೃತಿ ಅಭಿಯಾನದಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ತಗ್ಗಿಸಿ. ಪಟಾಕಿ ಸಿಡಿತದಿಂದ ಸಂಭವಿಸುವ ಅವಘಡಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಜಿಲ್ಲಾ ಪರಿಸರ ಅಧಿಕಾರಿ ಎಂ.ಜಿ. ರಘುರಾಮ್ ಮಾತನಾಡಿ, ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪಟಾಕಿಗಳನ್ನು ಸಿಡಿಸದೇ ತ್ಯಜಿಸುವ ಮೂಲಕ ಹಸಿರು ದೀಪಾವಳಿ ಆಚರಣೆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಕಡ್ಡಾಯವಾಗಿ ಹಸಿರು ಪಟಾಕಿಗಳನ್ನೇ ಬಳಸಬೇಕು. ಹಸಿರು ಪಟಾಕಿಗಳ ಮೇಲೆ ವಿಶೇಷ ಚಿಹ್ನೆ ಮತ್ತು ಕ್ಯೂಆರ್ ಕೋಡ್ ಇರುತ್ತದೆ. ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ. ಹಸಿರು ಪಟಾಕಿ ಬದಲಿಗೆ ಮಾಲಿನ್ಯಕಾರಿ ಪಟಾಕಿಗಳನ್ನು ಮಾರಾಟ ಮಾಡಿದ್ದಲ್ಲಿ ಅಂತಹವರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ ಎಂದರು.
ಹಸಿರು ದೀಪಾವಳಿ ಆಚರಣೆ ಕುರಿತ ಮಾಹಿತಿಯುಳ್ಳ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ ಪಿ.ಕೆ. ವೆಂಕಟೇಶ್ ಪ್ರಸನ್ನ, ದೀಪಾವಳಿ ಹಬ್ಬದ ಸಂದರ್ಭ ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಹಣತೆ ಬೆಳಗಿಸುವ ಕುರಿತು ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಹಸಿರು ದೀಪಾವಳಿ ಆಚರಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಹಸಿರು ದೀಪಾವಳಿ ಆಚರಿಸಲಾಗುವುದು ಎಂದು ಪ್ರತಿಜ್ಞೆ ಸ್ವೀಕರಿಸಿದರು.
ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಟಿ.ಎಂ. ಸುಧಾಕರ್, ಸ್ಕೌಟ್ಸ್ ರೋವರ್ಸ್ ನ ಲೀಡರ್ ನವೀನ್ ಕುಮಾರ್, ಮಂಡಳಿಯ ಯೋಜನಾ ಸಹಾಯಕ ಆಸ್ಟಿನ್, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ರೇಂಜರ್ಸ್ ಮತ್ತು ರೋವರ್ಸ್ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಇದ್ದರು.