

ಗುಂಡ್ಲುಪೇಟೆ: ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳು ಹಾಗೂ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಇದರ ಬಗ್ಗೆ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ಅರಿವು ಮೂಡಿಸಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದರು. ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆಗೆ ಸಜ್ಜಾಗಬೇಕಾಗಿದೆ. ಮುಂದಿನ ಎರಡೂವರೆ ವರ್ಷದಲ್ಲಿ ವಿಧಾನಸಭೆಗೂ ಚುನಾವಣೆ ನಡೆಯುತ್ತದೆ. ರಾಜ್ಯದ ಕಾಂಗ್ರೆದ್ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದರೂ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಳ್ಳದೆ ಮನೆ ಮನೆಗಳಿಗೆ ಹೋಗಿ ಅರಿವು ಮೂಡಿಸಬೇಕು. ಅಲ್ಲದೆ ಕೇಂದ್ರ ಸರ್ಕಾರದ ಮತಗಳ್ಳತನದ ಬಗ್ಗೆ ಕಾಂಗ್ರೆಸ್ ಸಾಕ್ಷಿ ಸಮೇತ ಅಭಿಯಾನ ನಡೆಸುತ್ತಿದೆ. ಇದರಿಂದ ಮುಂಬರುವ ಚುನಾವಣೆಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿ ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ವಿನೋದ್‌ರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಶೇಖರ್, ಮುನಿರಾಜು, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್.ಮಹೇಶ್, ಪುರಸಭೆ ಅಧ್ಯಕ್ಷ ಪಿ.ಶಶಿಧರ್(ದೀಪು), ಉಪಾಧ್ಯಕ್ಷ ಕಪ್ಪಣ್ಣ ಇತರರು ಇದ್ದರು.