ಸಂಘಟನೆಯಿಂದ ಸಮಾಜ ಮೇಲೆತ್ತಲು ಮುಂದಾಗಿ

Shankar bidari
ಆಲೂರು ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ತಾಲೂಕು ವೀರಶೈವ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ ಮಾತನಾಡಿದರು. ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಸಿದ್ದೇಶ್ ನಾಗೇಂದ್ರ, ಪರಮೇಶ್, ಕಟ್ಟಾಯ ಶಿವಕುಮಾರ್, ಬಸವರಾಜ್, ರಾಜಣ್ಣ, ಅಜಿತ್ ಚಿಕ್ಕಕಣಗಾಲು ಇತರರು ಇದ್ದರು.
Published on

ಆಲೂರು: ವೀರಶೈವ ಸಮಾಜ ತುಳಿತಕ್ಕೆ ಒಳಗಾಗುತ್ತಿದ್ದು, ಸಮಾಜದ ಸಂಘಟನೆಗಳು ಸಂಘಟಿತರಾಗಿ ಸಮಾಜವನ್ನು ಮತ್ತಷ್ಟು ಮೇಲೆತ್ತುವ ಪ್ರಯತ್ನ ಮಾಡಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಹೇಳಿದರು.

ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ತಾಲೂಕು ವೀರಶೈವ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡದೆ ಸಂಘಟನೆಗಳ ಮೂಲಕ ಮತ್ತಷ್ಟು ಸಮಾಜವನ್ನು ಬಲಪಡಿಸುವ ಪ್ರಯತ್ನ ಮಾಡಬೇಕು. ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಸಂಘವನ್ನು ಮತ್ತಷ್ಟು ಸದೃಢಗೊಳಿಸುವ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಬೇಕು. ಸಂಘದ ಬಲವರ್ಧನೆಗೆ ಪ್ರತಿಯೊಬ್ಬರೂ ಕೈಜೋಡಿಸಿ ನೂತನ ಅಧ್ಯಕ್ಷರೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಸಂಘಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ವೀರಶೈವ ಧರ್ಮಕ್ಕೆ ಪರಮಾಚಾರ್ಯರ ಕೊಡುಗೆ ಅಪಾರವಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆ ಪಂಚಪೀಠಗಳ ಕೊಡುಗೆಯಾಗಿದೆ. ಧರ್ಮ ಜಾಗೃತಿ ಜತೆಗೆ ಸಾಮಾಜಿಕ ಸತ್ಕಾಂತಿ ಮಾಡಿದ ಕೀರ್ತಿ ಗುರು ಪರಂಪರೆಗೆ ಸಲ್ಲುತ್ತದೆ. ಪಂಚಪೀಠಗಳು ಆದಿಕಾಲದಿಂದಲೂ ಧರ್ಮ ರಕ್ಷಣೆ, ಸಾಮಾಜಿಕ ಸುಧಾರಣೆಗೆ ಮಾರ್ಗದರ್ಶನ ಮಾಡಿವೆ ಎಂದು ಹೇಳಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಪದಗ್ರಹಣ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಸಂಕ್ಲಾಪುರ ಮಠದ ಪೀಠಾಧ್ಯಕ್ಷ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿದ್ದೇಶ್ ನಾಗೇಂದ್ರ, ಹಾಸನ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಪರಮೇಶ್, ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಬೇಲೂರು ತಾಲೂಕು ಅಧ್ಯಕ್ಷ ಬಸವರಾಜ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಅಜಿತ್ ಚಿಕ್ಕಕಣಗಾಲು, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಶಿವಮೂರ್ತಿ, ಸಹ ಕಾರ್ಯದರ್ಶಿ ಡಾ. ಜಯರಾಜ್, ಖಜಾಂಚಿ ಟೀಕರಾಜ್, ವೀರಶೈವ ಸಮಾಜದ ಮುಖಂಡರಾದ ಕಬ್ಬಿನಹಳ್ಳಿ ಜಗದೀಶ್, ಶಾಂತಪ್ಪ, ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net