ಆರೋಗ್ಯಪೂರ್ಣ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿ

Go ahead to build a healthy nation
ಜಮಖಂಡಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿದರು. ಡಿವೈಎಸ್‌ಪಿ ಶಾಂತವೀರ ಈ., ಭೂ ಸ್ವಾಧೀನ ವಿಶೇಷ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ, ತಾಪಂ ಇಒ ಸಂಜೀವ ಜಿನ್ನೂರ ಇತರರಿದ್ದರು.
Published on

ಜಮಖಂಡಿ: ಜಾತಿ, ಮತ ಎನ್ನದೆ ಎಲ್ಲರೂ ಸರಿಸಮಾನರಂತೆ ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತೆ ಸಂವಿಧಾನ ರಚಿಸಿದ ಕೀರ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸ್ವಚ್ಛ, ಸಶಕ್ತ, ಸುಭದ್ರ ಭಾರತವನ್ನಾಗಿ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಅವಿಸ್ಮರಣೀಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಶ್ರಯದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

140 ಕೋಟಿ ಜನಸಂಖ್ಯೆ ಹೊಂದಿದ್ದರೂ ಎಲ್ಲ ವರ್ಗದವರು ಸುಖ, ಶಾಂತಿಯಿಂದ ಬದುಕು ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದು ಆರೋಗ್ಯಪೂರ್ಣ ರಾಷ್ಟ್ರ ನಿರ್ಮಾಣವಾಗಬೇಕಾಗಿದೆ ಎಂದರು.

ಬೇರೆ ಸಂಸ್ಕೃತಿಯನ್ನು ಪ್ರೀತಿಸಿ ನಮ್ಮ ಸಂಸ್ಕೃತಿಯಲ್ಲಿ ಜೀವಿಸಬೇಕು. ಮಕ್ಕಳು ಸರ್ವತೋಮುಖ ಅಭಿವೃದ್ಧಿಯಾಗಬೇಕು. ಸ್ಥಿತಿ, ಸಮಯಪ್ರಜ್ಞೆ, ಮಾನಸಿಕ, ಶಾರೀರಿಕ ಸದೃಢತೆಯಾಗಿರಬೇಕು ಎಂಬುದು ಸರ್ಕಾರದ ಚಿಂತನೆಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳು ಸಾಗಬೇಕು ಎಂದರು.

ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ದ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶ ಸುಖ ಸಮೃದ್ಧಿಯಿಂದ ಇರಬೇಕಾದರೆ ಸಂವಿಧಾನದ ಮೂಲ ಧ್ಯೇಯಗಳನ್ನು ಪ್ರತಿಯೊಬ್ಬರೂ ಅರಿತು ನಡೆಯಬೇಕಾಗಿದೆ. ಸಂವಿಧಾನ ನಮಗೆ ಸಾಮಾಜಿಕ ನ್ಯಾಯ ಒದಗಿಸಿ ಕೊಟ್ಟಿದೆ. ಬಸವಣ್ಣನವರ ಕಾಯಕ ದಾಸೋಹ ಮೂಲ ಮಂತ್ರವಾಗಿತ್ತು. ಅವರ ಸಂದೇಶದಂತೆ ಎಲ್ಲರೂ ಹಂಚಿಕೊಂಡು ತಿನ್ನುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಬಿಎಲ್‌ಡಿಇ ಕಾಲೇಜಿನ ವಿದ್ಯಾರ್ಥಿ ಪ್ರಲ್ಹಾದ ಬೇವನೂರ ಹಾಗೂ ಹುನ್ನೂರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶಶಿಕಲಾ ಅತ್ತೆಪ್ಪನವರ ಸರ್ವೋಚ್ಛ ಭಾರತ ಸರ್ವತೋಮುಖ ಅಭಿವೃದ್ಧಿ ಕುರಿತು ಮಾತನಾಡಿದರು.

ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಗೈಡ್ಸ್, ಸೇವಾದಳ ಸೇರಿ 19ಕ್ಕೂ ಹೆಚ್ಚು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಜಿಜಿ, ಪಿಬಿ, ಸ್ವಾಮಿ ವಿವೇಕಾನಂದ, ವಿಶ್ವೇಶ್ವರಯ್ಯ ಪ್ರೌಢಶಾಲೆಯ ಹಾಗೂ ಕೆಜಿಬಿವಿ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಾಹಿತ್ಯ, ಕೃಷಿ, ಪತ್ರಿಕೋದ್ಯಮ, ಸಮಾಜ ಸೇವೆ, ಕಂದಾಯ ಇಲಾಖೆ, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಎಂ. ಸಿ. ಗೊಂದಿ, ಶಂಕರ ಲಮಾಣಿ, ಭೀಮಶಿ ಗುಮ್ಮಕ್ಕನವರ, ಮಲ್ಲಪ್ಪ ಪೋತರಾಜ, ರಾಜೇಶ್ವರಿ ಹಿರೇಮಠ, ಸಂತೋಷ ಮಾಲಗಾರ, ಪಿ.ಎಸ್. ಕಾಳೆ, ವಿಶ್ವನಾಥ ಶಾವಿ, ಬಿ.ಬಿ. ಜೈನರ, ಶರಣಪ್ಪ ಅರೇಗೊಳ, ಲಾಲಸಾಬ ಜಮಾದಾರ ಹಾಗೂ ಕೆಎಸ್‌ಆರ್‌ಟಿಸಿ ಅಪಘಾತ ರಹಿತ ಚಾಲಕರಿಗೆ ಗೌರವಿಸಲಾಯಿತು.

ಡಿವೈಎಸ್‌ಪಿ ಶಾಂತವೀರ ಈ., ಭೂ ಸ್ವಾಧೀನ ವಿಶೇಷ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ, ತಾಪಂ ಇಒ ಸಂಜೀವ ಜಿನ್ನೂರ, ಸಿಪಿಐ ಮಲ್ಲಪ್ಪ ಮಡ್ಡಿ, ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ಉಪ ಖಜಾನಾಧಿಕಾರಿ ಬಿರಾದಾರ, ನಗರಸಭೆ ಸದಸ್ಯರು ಇದ್ದರು.

ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ತಹಸೀಲ್ದಾರ್ ಸದಾಶಿವ ಮಕ್ಕೋಜಿ ಸ್ವಾಗತಿಸಿದರು. ಡಾ. ಎನ್.ವಿ. ಅಸ್ಕಿ ನಿರೂಪಿಸಿದರು. ಬಿಇಒ ಅಶೋಕ ಬಸನ್ನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net