

ಮುದಗಲ್: ಪಟ್ಟಣದ ಮೂಲಕ ಹಾದುಹೋಗುವ ಬೆಳಗಾವಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆಪದಲ್ಲಿ ಜಿಎಲ್‌ಆರ್ ಗುತ್ತಿಗೆ ಕಂಪನಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಇದನ್ನೂ ಓದಿ:ಶಾರ್ಟ್ ಸರ್ಕ್ಯೂಟ್ನಿಂದ ತೊಗರಿ ನಾಶ
ಸಮೀಪದ ಆಮದಿಹಾಳ ಸೀವಾರದ ಸರ್ವೇ ನಂ.72ರಲ್ಲಿ ರಸ್ತೆಗೆ ಹೊಂದಿಕೊಂಡ 8 ಎಕರೆ ಭೂಮಿಯಲ್ಲಿ ಬೆಳೆದ ತೊಗರಿ ಬೆಳೆಯನ್ನು ಗುರುವಾರ ಜಿಎಲ್‌ಆರ್ ಕಂಪನಿ ಸಿಬ್ಬಂದಿ ಯಂತ್ರಗಳಿಂದ 17 ಗುಂಟೆ ತೊಗರಿ ನಾಶ ಮಾಡಿದ್ದಾರೆ. ಮುದಗಲ್ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಎಸ್‌ಎಲ್‌ಒ ಗುರುಸಿದ್ದಯ್ಯ ಹಿರೇಮಠ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮುದಗಲ್‌ನಿಂದ ಆಮದಿಹಾಳ ಸೀವಾರದ ಹಲವು ಪ್ರದೇಶಗಳ ಅಡೆತಡೆಗಳನ್ನು ಲೆಕ್ಕಿಸದೆ, ರೈತರ ಮನವಿಗೆ ಸ್ಪಂದಿಸದೆ ಬೆಳೆ ನಾಶ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಭೂ ಪರಿಹಾರ ಮಾತ್ರ ನಮ್ಮ ಖಾತೆಗೆ ಜಮಾ ಆಗಿದ್ದು, ಬೆಳೆ ಪರಿಹಾರ, ಬೋರ್‌ವೆಲ್ ಮತ್ತು ಗಿಡ ಮರಗಳ ಸಹಾಯ ಧನ ಫಲಾನುಭವಿಗಳಿಗೆ ನೀಡದೆ ಜಿಎಲ್‌ಆರ್ ಕಂಪನಿ ವಂಚಿಸಿದೆ ಎಂದು ದೂರಿದ ರೈತರು, ರಸ್ತೆ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ನಾವು ಸಹಕರಿಸುತ್ತೇವೆ. ಆದರೆ, ನಮಗೆ ಸಹಾಯ ಧನ ಅಥವಾ ಪರಿಹಾರ ಧನ ವಿತರಿಸಿ ಎಂದು ಆಮದಿಹಾಳ ರೈತರು ಮನವಿ ಮಾಡಿದರು. ಪ್ರಮುಖರಾದ ರಮೇಶಗೌಡ, ವಾಯುಪುತ್ರ ಇತರರಿದ್ದರು.