

ಮುಗಳಖೋಡ: ಪಟ್ಟಣದ ರೇಣುಕಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ದೇವಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ರಾತ್ರಿ ಡೊಳ್ಳು ಹಾಗೂ ಚೌಡಕಿ ಮೇಳಗಳಿಂದ ಆಧ್ಯಾತ್ಮಿಕ ಗಾಯನ ಕಾರ್ಯಕ್ರಮ ಜರುಗಿದವು. ಬುಧವಾರ ಬೆಳಗ್ಗೆ ದೇವಿಗೆ ಮಹಾಭಿಷೇಕ ನೈವೇದ್ಯ, ನಂತರ ಪಟ್ಟಣದ ಪ್ರಮುಖ ಸಂಗೊಳ್ಳಿ ರಾಯಣ್ಣ ವೃತ್ತ, ಅಡವಿಸಿದ್ದೇಶ್ವರ ಮಂದಿರ, ಹನುಮಾನ ಮಂದಿರ, ಬಸವೇಶ್ವರ ದೇವಸ್ಥಾನ ಮಾರ್ಗದಲ್ಲಿ ಕುಂಭ ಹೊತ್ತ ಸುಮಂಗಲೆಯರು ಹಾಗೂ ಸಕಲ ವಾದ್ಯವೃಂದದೊಂದಿಗೆ ದೇವಿಯ ಭವ್ಯ ಮೆರವಣಿಗೆ ನಡೆಯಿತು. ಮಧ್ಯಾಹ್ನ ಹಡಲಗಿ ತುಂಬಿ ನಂತರ ಮಹಾಪ್ರಸಾದ ಸೇವೆ ಸಲ್ಲಿಸಲಾಯಿತು.
ರಾತ್ರಿ ರೇಣುಕಾದೇವಿ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು. ಭಕ್ತರು ದೇವಿ ದರ್ಶನ ಪಡೆದರು. ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ದೇವಸ್ಥಾನದ ಸಮಿತಿಯ ಸರ್ವ ಸದಸ್ಯರು, ಪಟ್ಟಣ ಸಕಲ ಸದ್ಭಕ್ತರು ಇದ್ದರು.