

ಮೇಲುಕೋಟೆ: ಮೇಲುಕೋಟೆ ಜೀರ್ಣೋದ್ಧಾರ ಮಾಡಿ ಹುತ್ತದಲ್ಲಡಗಿದ್ದ ಚೆಲುವನಾರಾಯಣಸ್ವಾಮಿಯನ್ನು ದರ್ಶನ ಮಾಡಿದ ಪ್ರತೀಕವಾದ ಪುನರ್ವಸು ಉತ್ಸವ ಶುಕ್ರವಾರ ವೈಭವದಿಂದ ನೆರವೇರಿತು.
ತಮಿಳುನಾಡಿನಿಂದ ಶುಕ್ಲಪುನರ್ವಸು ನಕ್ಷತ್ರದಂದು ಸಾವಿರ ಶಿಷ್ಯರೊಂದಿಗೆ ಮೇಲುಕೋಟೆಗೆ ಆಗಮಿಸಿದ್ದ ರಾಮಾನುಜರು ಕಾಡಿನ ನಡುವೆಯಿದ್ದ ಹುತ್ತ ಕರಗಿಸಿ ಶ್ರೀಚೆಲುವನಾರಾಯಣನ ದರ್ಶನ ಪಡೆದ ಕಾರಣ ಪ್ರತಿ ಸಂವತ್ಸವರದಲ್ಲೂ ಪುನರ್ವಸು ಉತ್ಸವ ನೆರವೇರುತ್ತಾ ಬಂದಿದ್ದು, ಈ ಸಂವತ್ಸರದ ಮಕರ ಶುಕ್ಲ ಪುನರ್ವಸು ದಿನದಂದು ಮಹೋತ್ಸವ ನಡೆಯುತ್ತದೆ.
ವಿದ್ವಾನ್ ಬಿ.ವಿ.ಆನಂದಾಳ್ವಾರ್ ನೇತೃತ್ವದಲ್ಲಿ ನಡೆದ ಉತ್ಸವದ ವೇಳೆ ಚೆಲುವನಾರಾಯಣನ ದೇವಾಲಯದ ಆವರಣವನ್ನು ತಳಿರು ತೋರಣ ಮತ್ತು ಆಕರ್ಷಕ ಚಪ್ಪರಗಳಿಂದ ಅಲಂಕಾರ ಮಾಡಲಾಗಿತ್ತು. ರಾಜಗೋಪುರ ವರ್ಣಮಯ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.
ಬೆಳಗ್ಗೆ 5.30ಕ್ಕೆ ರಾಮಾನುಜಾಚಾರ್ಯರಿಗೆ ಅಭಿಷೇಕ ನೆರವೇರಿತು. ಬೆಳಗ್ಗೆ 7 ರಿಂದ 10.30 ವರೆಗೆ ಕಲ್ಯಾಣಿಯಲ್ಲಿ ಶ್ರೀರಾಮಾನುಜರಿಗೆ ನಿತ್ಯ ಪೂಜಾ ಕೈಂಕರ್ಯ ನೆರವೇರಿತು. ಕಲ್ಯಾಣಿಯಿಂದ ಹೊರಟ ಆಚಾರ್ಯರ ಉತ್ಸವ ಮಧ್ಯಾಹ್ನ 12.30ಕ್ಕೆ ದಿವ್ಯಪ್ರಬಂಧ ಪಾರಾಯಣ, ವಿಶೇಷ ಮಂಗಳವಾದ್ಯದೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ತಲುಪಿತು.
ವಂಗೀಪುರಂ ಮಠದಲ್ಲಿ ರಾಮಾನುಜರಿಗೆ ಸಮರ್ಪಿಸಲು ನೂರಾರು ತಟ್ಟೆಗಳಲ್ಲಿ ಜೋಡಿಸಿದ್ದ ಸೇಬು, ಸೀಬೆ, ದಾಳಿಂಬೆ, ಪರಂಗಿ ದ್ರಾಕ್ಷಿ, ಮಾವು, ಹೀಗೆ ನೂರಾರು ವಿವಿಧ ಬಗೆಯ ಹಣ್ಣುಗಳು ಮತ್ತು ಹೂವುಗಳು ಭಕ್ತರ ಮನಸೂರೆಗೊಂಡವು.
ಆಂಧ್ರಪ್ರದೇಶ, ತಮಿಳುನಾಡು ಮುಂತಾದ ಕಡೆಗಳಿಂದ ಬಂದಿದ್ದ ನೂರಾರು ಭಕ್ತರೊಂದಿಗೆ ಇಳೈ ಆಳ್ವಾರ್ ಸ್ವಾಮೀಜಿ ದಂಪತಿ ಛತ್ರಿ, ಚಾಮರ, ಮಂಗಳವಾದ್ಯದೊಂದಿಗೆ ಭವ್ಯ ಮೆರವಣಿಗೆಯಲ್ಲಿ ತಟ್ಟೆಗಳನ್ನು ಕೊಂಡೊಯ್ದು ತಿರುನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಸಮರ್ಪಿಸಿದರು. ವಿಶೇಷ ಪೂಜಾ ಕೈಂಕರ್ಯ ಮತ್ತು ನಿವೇದನ ನಡೆದ ನಂತರ ಹಣ್ಣುಗಳಿಂದ ಪ್ರಸಾದ ತಯಾರಿಸಿ ಸಹಸ್ರಾರು ಭಕ್ತರಿಗೆ ವಿತರಿಸಲಾಯಿತು.