

ವಿಜಯಪುರ: ಕಲಿಯುಗದ ಕಾಮಧೇನು-ಕಲ್ಪವೃಕ್ಷ ಸದೃಶರಾಗಿ ಭಕ್ತ ಜನರ ಕಷ್ಟಗಳನ್ನು ಕಳೆದು ಇಷ್ಟಾರ್ಥಗಳನ್ನು ಅನುಗ್ರಹಿಸುತ್ತಿರುವ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವದಂಗವಾಗಿ ಶನಿವಾರ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಉತ್ತರಾರಾಧನೆಯು ಅತ್ಯಂತ ಭಕ್ತಿಪುರಸ್ಸರವಾಗಿ ಜರುಗಿತು.
ಅದರಂಗವಾಗಿ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ ಜರುಗಿದವು. ಬಳಿಕ ಅಷ್ಟೋತ್ತರ, ಫಲ ಪಂಚಾಮೃತ ಅಭಿಷೇಕ ನೆರವೇರಿತು.
ಬೆಳಗ್ಗೆ 10ಕ್ಕೆ ರಾಜಬೀದಿಗಳಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಭವ್ಯ ರಥೋತ್ಸವ ಜರುಗಿತು. ಹೂವಿನಿಂದ ಅಲಂಕೃತ ವಾಹನದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಉತ್ಸವ ಮೂರ್ತಿ ಹಾಗೂ ಗುರುಸಾರ್ವಭೌಮರ ಭಾವ ಚಿತ್ರದ ಆಕರ್ಷಣೆ ತಂದಿತು. ಜುಮನಾಳದ ಪಂಢರಪುರ ವಿಠ್ಠಲ ಮಂದಿರದ ಭಕ್ತರು ವಾರಕರಿ ಸಂಪ್ರದಾಯದಂತೆ ವೇಷ ಭೂಷಣ ತೊಟ್ಟು, ತಮ್ಮ ಸುಮಧುರ ಕಂಠದಿಂದ ಲಯಬದ್ಧವಾಗಿ ಭಜನೆ ಮಾಡುತ್ತ, ಮೆರವಣಿಗೆಯುದ್ದಕ್ಕೂ ಭಕ್ತಿ ಭಾವ ಮೆರೆದರು.
ಪ್ರಲ್ಹಾದರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಆವರಣದಲ್ಲಿ ತರುತ್ತಿದ್ದಂತೆ ಭಕ್ತರು ಭಕ್ತಿ ಭಾವದಿಂದ ತಮ್ಮ ಶ್ರದ್ಧೆಯನ್ನು ಪ್ರದರ್ಶಿಸಿದರಲ್ಲದೇ, ಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸುತ್ತಿದ್ದಂತೆ ಅದರ ಸುತ್ತಲೂ ತಾವು ಪ್ರದಕ್ಷಿಣೆ ಹಾಕಿದರು.
ಬಳಿಕ ಶ್ರೀಮಠದ ಆವರಣದಲ್ಲಿ ನಡೆದ ಭವ್ಯ ರಥೋತ್ಸವವಂತೂ ಸಂಗೀತ-ವಾದ್ಯ- ನೃತ್ಯ ಮುಂತಾದವುಗಳಿಂದ ಭೋರ್ಗರೆದು, ಎಲ್ಲೆಲ್ಲೂ ಭಕ್ತಿಯ ಪರಾಕಾಷ್ಠೆ ಮೆರೆಯಿತು. ಗುರುಸಾರ್ವಭೌಮರ ಕುರಿತಾದ ಹಾಡುಗಳನ್ನು ಹಾಡುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರಥೋತ್ಸವದ ಮೇಲೆಲ್ಲ ಪುಷ್ಪ ವೃಷ್ಟಿಮಾಡಲಾಯಿತು. ನೆರೆದ ಭಕ್ತರೆಲ್ಲ ಭಾವ ಪುಳಕಿತರಾಗಿ ಕುಣಿದು ಕುಪ್ಪಳಿಸಿದರು. ಭಕ್ತರೆಲ್ಲ ಮೈತುಂಬ ಗುಲಾಲು ಎರಚಿಕೊಂಡು ಭಕ್ತಿ ಭಾವ ಮೆರೆದರು.
ಬಳಿಕ ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಪಾದ ಪೂಜೆ ನೆರವೇರಿಸಲಾಯಿತು. ಆನಂತರ ಅರ್ಚನೆ ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ ಜರುಗಿ ತೀರ್ಥ ಪ್ರಸಾದ ನಡೆಯಿತು.
ಉತ್ತರಾರಾಧನೆ ಪ್ರಯುಕ್ತ ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ಶ್ರೀಮಠಕ್ಕೆ ಬಂದು ಗುರುಸಾರ್ವಭೌಮರ ವೃಂದಾವನದ ದರ್ಶನ ಪಡೆದು ಪುನೀತರಾದರು. ಭಕ್ತರು ತಮಗೆ ತಿಳಿದಂತೆ ವೃಂದಾವನದ ಸುತ್ತ ಪ್ರದಕ್ಷಿಣೆ ಹಾಕುತ್ತ, ಮನದಲ್ಲಿ ಗುರು ರಾಯರನ್ನು ಸ್ಮರಿಸುತ್ತ, ಭಕ್ತಿಯಿಂದ ಮನದಾಳದಲ್ಲಿ ಪ್ರಾರ್ಥಿಸುತ್ತಿದ್ದುದು ಕಂಡು ಬಂದಿತು.
ಮಾಜಿ ಸಚಿವ ಗೋವಿಂದ ಕಾರಜೋಳ ಶ್ರೀಮಠಕ್ಕೆ ಆಗಮಿಸಿ ಗುರುರಾಯರ ವೃಂದಾವನದ ದರ್ಶನ ಪಡೆದು ಆಶೀರ್ವಾದ ಪಡೆದರು.
ವೃಂದಾವನವನ್ನು ಶ್ರೀಮಠದ ಅರ್ಚಕರಾದ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯರು ಹಾಗೂ ಪವಮಾನ ಜೋಶಿ(ಮುತ್ತಗಿ)ಯವರೊಂದಿಗೆ ಸೇರಿಕೊಂಡು ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕರಿಸಿದ್ದು ಭಕ್ತರ ಕಣ್ಮನ ಸೆಳೆಯಿತು.
ಶ್ರೀಮಠದ ವಿಚಾರಣಾಕರ್ತ ಗೋಪಾಲ ನಾಯಕ, ಸೇವಾಕರ್ತ ವಿ.ಬಿ. ಕುಲಕರ್ಣಿ, ಆರ್.ಆರ್. ಕುಲಕರ್ಣಿ, ಜಿ.ಎಸ್. ಕುಲಕರ್ಣಿ, ಕಿರಣ ಜೋಶಿ( ಜುಮನಾಳಕರ), ಅಶೋಕ ದಿಕ್ಷಿತ, ಶಾಮಭಟ್ಟ ಜೋಶಿ, ಪ್ರಕಾಶ ಬಿಜಾಪುರ, ಕಿರಣ ಕುಲಕರ್ಣಿ, ಗುರುರಾಜ ಸೊಂಡೂರ, ಗಿರೀಶ, ಭೀಮಣ್ಣ ಕುಲಕರ್ಣಿ, ಬಂಡಾಚಾರ್ಯ ಜೋಶಿ(ಕೂಡಗಿ), ವಿ.ಡಿ. ಜೋಶಿ, ಅಶೋಕ ತಾವರಗೇರಿ, ಅರುಣ ತೊರವಿ ಮತ್ತಿತರರಿದ್ದರು.
ಉತ್ತರಾರಾಧನೆ ಪ್ರಯುಕ್ತ ಸೆ.3 ರಂದು ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ ಅಂಗವಾಗಿ ಅಷ್ಟೋತ್ತರ ಸಹಿತ ಫಲ ಪಂಚಾಮೃತ ಅಭಿಷೇಕ, ಪವಮಾನ ಹೋಮ ನಡೆಯುವ ಮೂಲಕ ಪಂಚರಾತ್ರೋತ್ಸವ ಕೊನೆಗೊಳ್ಳಲಿದೆ.