

ವಿಜಯಪುರ : ಕಲೆ, ಸಂಸ್ಕೃತಿ ದೇಶದ ಆಸ್ತಿ. ಪ್ರತಿಯೊಂದು ದೇಶಗಳಲ್ಲಿ ತನ್ನದೆಯಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಆನಂದ ಮಹಲ್ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ‘ಜನಪರ ಉತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಕೊಡುಗೆ ಅಪಾರ. ಅವುಗಳು ದೇಶದ ಜನರ ಮೌಲ್ಯ, ಗುರಿ, ವರ್ತನೆ ಹಾಗೂ ಭಾವನೆಯನ್ನು ಪ್ರತಿಬಿಂಬಿಸುತ್ತವೆ. ಆರ್ಥಿಕವಾಗಿ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಂಸ್ಕೃತಿಯನ್ನು ಕಾಣಬಹುದಾಗಿದೆ ಎಂದರು. ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ. ಇಲ್ಲಿನ ಪಾರಂಪರಿಕ ಕಲೆ, ಸಂಸ್ಕೃತಿ ಗ್ರಾಮೀಣ ಭಾಗದಲ್ಲಿ ಇಂದಿಗೂ ಕಾಣಬಹುದು. ಗ್ರಾಮೀಣ ಪ್ರತಿಭೆಗಳ ಅನಾವರಣ ಮಾಡಲು ಇಂತಹ ಉತ್ಸವಗಳು ನಡೆಯಬೇಕಿದೆ. ಅದಕ್ಕಾಗಿ ಸರ್ಕಾರ ಅನೇಕ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಅದರ ಸದ್ಬಳಕೆಯನ್ನು ಕಲಾವಿದರು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಳೆದೆರಡು ವರ್ಷಗಳಿಂದ ಕೊವೀಡ್ ಕಾರಣದಿಂದಾಗಿ ಆನಂದ ಮಹಲ್‌ನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಇದೀಗ ಅವುಗಳಿಗೆ ಮರುಜೀವ ಸಿಕ್ಕಂತಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿಗಳ ಆಶಯದಂತೆ ಪ್ರತಿ ತಿಂಗಳ ಅಂತ್ಯಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯ ಲಲಿತಕಲಾ ಅಕಾಡೆಮಿ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ವಿಜಯಪುರ ಜಿಲ್ಲೆ ಸಾಂಸ್ಕೃತಿಕವಾಗಿ ಅಪಾರ ಕೊಡುಗೆಯನ್ನು ನೀಡಿದೆ. ಇಲ್ಲಿ ನಡೆಯುತ್ತಿದ್ದ ನವರಸಪುರ ಉತ್ಸವ ರಾಜ್ಯಕ್ಕೆ ಮಾದರಿ ಆಗಿತ್ತು. ಕೆಲ ಕಾರಣಾಂತರಗಳಿಂದ ಈ ಉತ್ಸವ ನಡೆದಿಲ್ಲ. ಮುಂದಿನ ದಿನಗಳಲ್ಲಿ ನವರಸಪುರ ಉತ್ಸವ ಆಯೋಜಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಶ್ವೇತಾ ದಾನಮ್ಮನವರ ಇತರರು ಪಾಲ್ಗೊಂಡಿದ್ದರು.
ಗಮನ ಸೆಳೆದ ಕಲಾ ತಂಡಗಳು
ಜನಪರ ಉತ್ಸವದಲ್ಲಿ ಸಮೂಹ ನತ್ಯ, ಜಾನಪದ ಗೀತೆಗಳು, ಚೌಡಕಿ ಪದಗಳು, ಮೋಚಿಂಗ್ ವಾದನ, ಗೀಗೀ ಪದಗಳು, ಜಾನಪದ ನೃತ್ಯ, ಕೃಷ್ಣಾ-ರುಕ್ಮೀಣಿ, ಶ್ರೀಕೃಷ್ಣ ಪಾರಿಜಾತ, ಭಜನೆ ಹಾಡು, ಡೊಳ್ಳು ಕುಣಿತ, ಡೊಳ್ಳು ಹಾಡು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೂ ಮುನ್ನ 9 ವಿವಿಧ ಕಲಾ ತಂಡಗಳ ಕಲಾವಿದರು ಮೆರವಣಿಯಲ್ಲಿ ಪಾಲ್ಗೊಂಡಿದ್ದರು. ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಂಡು, ಗಾಂಧಿ ಚೌಕ್‌ಮಾರ್ಗವಾಗಿ ಬಸವೇಶ್ವರ ವೃತ್ತ ಮೂಲಕ ಆನಂದ ಮಹಲ್ ಆವರಣಕ್ಕೆ ಕಲಾ ಮೇಳಗಳು ಆಗಮಿಸಿದ್ದವು.