

ಅರಕಲಗೂಡು: ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದ ವೈಭವೋಪೇತ ದಸರಾ ಉತ್ಸವದಲ್ಲಿ ಬಣ್ಣ ಬಣ್ಣದ ಬೆಳಕಿನ ವಿದ್ಯುತ್ ದೀಪಾಲಂಕಾರಗಳ ನಡುವೆ ಸಾಗಿದ ದೇವಾನುದೇವತೆಗಳ ಮೆರವಣಿಗೆ ಹಾಗೂ ವಿವಿಧ ಸ್ತಬ್ಧಚಿತ್ರಗಳ ಆಕರ್ಷಕ ಪ್ರದರ್ಶನವನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು.
ಗ್ರಾಮದೇವತೆ ಶ್ರೀ ದೊಡ್ಡಮ್ಮ, ಲಕ್ಷ್ಮೀನರಸಿಂಹಸ್ವಾಮಿ, ಅಮೃತೇಶ್ವರಸ್ವಾಮಿ, ಉಮಾ ಮಹೇಶ್ವರಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಎ.ಮಂಜು ಉತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಮಠಾಧೀಶರು, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶೃತಿ ಇದ್ದರು. ವಿವಿಧ ದೇವತೆಗಳ ಉತ್ಸವ ಹಾಗೂ ಸರ್ಕಾರಿ ಇಲಾಖೆಗಳು ತಯಾರಿಸಿದ್ದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಕೀಲು ಕುದುರೆ, ಗಾರುಡಿ ಗೊಂಬೆ, ವೀರಭದ್ರ ನೃತ್ಯ, ಮೊಬೈಲ್ ಆರ್ಕೆಸ್ಟ್ರಾ, ಡಿಜೆ ಸೌಂಡ್ಸ್ ಮುಂತಾದ ಕಲಾ ತಂಡಗಳು ಉತ್ಸವವಕ್ಕೆ ಮೆರುಗು ನೀಡಿದವು. ತಾಲೂಕು ಹಾಗೂ ಹೊರ ಜಿಲ್ಲೆಗಳಿಂದಲೂ ಬಂದಿದ್ದ ಸಾವಿರಾರು ಜನರು ರಸ್ತೆಯ ಎರಡೂ ಬದಿ ನಿಂತು ವೀಕ್ಷಿಸಿದರು. ಯುವಕರು ಹಾಗೂ ಯುವತಿಯರಿಗೆ ಪ್ರತ್ಯೇಕವಾಗಿದ್ದ ಡಿಜೆ ಸೌಂಡ್ಸ್‌ನ ಮಾದಕ ಗೀತೆಗಳಿಗೆ ಯುವಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಉತ್ಸವ ಅನಕೃ ವೃತ್ತದ ಮೂಲಕ ಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ ಸಂತೆಮರೂರು ರಸ್ತೆಯ ಬನ್ನಿಮಂಟಪ ಸೇರಿತು. ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ಬಳಿಕ ತಹಸೀಲ್ದಾರ್ ಬಸವರೆಡ್ಡಪ್ಪ, ರೋಣದ ಕದಳಿ ಛೇದನ ನಡೆಸಿದರು. ಸ್ವಾಮೀಜಿಗಳು ದೇವರ ಉತ್ಸವಗಳಿಗೆ ಬನ್ನಿ ಸಮರ್ಪಿಸಿದರು.
ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಶಾಸಕ ಎ.ಮಂಜು, 27 ವರ್ಷಗಳ ಹಿಂದೆ ವಿನೂತನ ಮಾದರಿಯಲ್ಲಿ ಮರು ಆರಂಭಗೊಂಡ ದಸರಾ ಈವರೆಗೂ ಅದ್ದೂರಿಯಾಗಿ ನಡೆದು ಬಂದಿದೆ. ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆಗೆ ಸಮಿತಿ ನಿರ್ಧರಿಸಲಾಯಿತಾದರೂ ಜನರ ಉತ್ಸಾಹದಿಂದ ವಿಜೃಂಭಣೆಯಿಂದ ನಡೆದಿದೆ. ಮುಂದಿನ ದಿನಗಳಲ್ಲಿ ಉತ್ಸವವನ್ನು ಇನ್ನೂ ಹೆಚ್ಚು ಆಕರ್ಷಣೀಯವಾಗಿ ಮಾಡಲು ಜನತೆ ಪ್ರೋತ್ಸಾಹ ನೀಡಬೇಕು ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು.
ಅತ್ಯುತ್ತಮ ರೇಷ್ಮೆ ಬೆಳೆಗಾರರಾದ ರಂಗಾಪುರದ ಕಮಲಮ್ಮ ಅವರಿಗೆ 2023ರ ದಸರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಪಪಂ ಸದಸ್ಯರಾದ ಹೂವಣ್ಣ, ಕೃಷ್ಣಯ್ಯ, ಪ್ರದೀಪ್‌ಕುಮಾರ್, ಅನಿಕೇತನ್, ಅನುಷಾ, ನಿಖಿಲ್‌ಕುಮಾರ್, ತಾಪಂ ಇಒ ಪ್ರಕಾಶ್, ಬಿಇಒ ದೇವರಾಜ್, ಪಪಂ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ ಇತರರು ಉಪಸ್ಥಿತರಿದ್ದರು.
ಅರಕಲಗೂಡಿನಲ್ಲಿ ಮಂಗಳವಾರ ರಾತ್ರಿ ನಡೆದ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರಿಗೆ ಅಡುಗೆ ಭಟ್ಟರಾದ ಮೋಹನ್ ಗಾಂಧಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸ್ವಯಂಸೇವಕರು ಹಾಗೂ ದಾನಿಗಳು ಅನ್ನಸಂತರ್ಪಣೆ ಏರ್ಪಡಿಸಿದ್ದರು.