

ಪಂಕಜ ಕೆ.ಎಂ. ಬೆಂಗಳೂರು
ಜಾಗತಿಕವಾಗಿ ಪ್ರತಿ ವರ್ಷ ಲಕ್ಷಾಂತರ ಜನ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಿದ್ದು, ಅಂದಾಜು ದಶಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಕುಟುಂಬ ಸೇರಿ ಸಮುದಾಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದರ ತಡೆಗಟ್ಟುವಿಕೆ, ಬೆಂಬಲ ಮತ್ತು ವ್ಯವಸ್ಥಿತ ಬದಲಾವಣೆಯ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂೃಎಚ್‌ಒ)ಯು ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಸಂಘದ ಸಹಯೋಗದಲ್ಲಿ 2003ರಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನ ಘೋಷಿಸಿತು. ಇದರೊಂದಿಗೆ ಪ್ರತಿ ವರ್ಷ ಸೆ.10 ರಂದು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ದೇಶದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಕನಿಷ್ಠ ಒಂದು ಆತ್ಮಹತ್ಯೆ ಪ್ರಕರಣ ವರದಿಯಾಗುತ್ತಿದೆ. ಅದರಲ್ಲಿ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ಬಳಿಕ ಯುವಜನತೆ ಹೆಚ್ಚಾಗಿ ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮೂರನೇ ಒಂದರಷ್ಟು ಮಂದಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಉಳಿದ ಎರಡು ಭಾಗದಷ್ಟು ಆರ್ಥಿಕ ಸಮಸ್ಯೆ ಹಾಗೂ ಕುಟುಂಬದ ಬಾಂಧವ್ಯ ಕಡಿದುಕೊಳ್ಳುವಿಕೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಕೂಡ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತಿದೆ. ಬಹುತೇಕ ಎಲ್ಲ ಮಾನಸಿಕ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಮನಸನ್ನು ಹತೋಟಿಯಲ್ಲಿ ಇಟ್ಟುಕೊಂಡಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಂದ ಅಂತರ ಕಾಯ್ದುಕೊಳ್ಳಬಹುದು ಎನ್ನುತ್ತಾರೆ ನಿಮ್ಹಾನ್ಸ್ ವೈದ್ಯರು.
ರಾಜ್ಯ 5ನೇ ಸ್ಥಾನ
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕವು ಗಮನಾರ್ಹ ಸಂಖ್ಯೆಯ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2021ರಲ್ಲಿ 13,056 ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿದೆ. ಇದು ಭಾರತದ ಒಟ್ಟು ಪ್ರಕರಣಗಳಲ್ಲಿ ಶೇ. 8 ಇದೆ. ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದ ನಂತರ ಅತಿ ಹೆಚ್ಚು ಆತ್ಮಹತ್ಯೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ.
ಕಾರಣಗಳು ಹಲವು
ಆತ್ಮಹತ್ಯೆಗೆ ಹಲವು ಮನೋ ಸಾಮಾಜಿಕ ಕಾರಣಗಳಿವೆ. ಮಾನಸಿಕ ಖಿನ್ನತೆ,
ಪರೀಕ್ಷೆಯ ಸೋಲು, ಹಣಕಾಸಿನ ತೊಂದರೆ, ವೈವಾಹಿಕ ಸಮಸ್ಯೆ, ಕೌಟುಂಬಿಕ ದೌರ್ಜನ್ಯ, ತೀವ್ರ ಬಡತನ, ಕೆಲಸದ ಒತ್ತಡ, ದೀರ್ಘಕಾಲಿಕ ಆರೋಗ್ಯ ಸಮಸ್ಯೆ ಮತ್ತು ನೋವು, ಭಾವನಾತ್ಮಕ ಸಂಬಂಧಗಳಲ್ಲಿ ಬಿರುಕು, ಹತಾಶೆ, ಜೀವನದ ಬಗೆಗಿನ ಜಿಗುಪ್ಸೆ, ಒಂಟಿತನ, ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವಿಕೆ, ಭವಿಷ್ಯದ ಬಗೆಗೆ ಅನಿಶ್ಚಿತತೆ, ಭಯ ಮತ್ತು ಆತಂಕ, ಜೀವನದಲ್ಲಿ ಹಠಾತ್ ಸಂಭವಿಸುವ ಕಷ್ಟ-ನಷ್ಟಗಳು ಮುಂತಾದವು.
ವರ್ತನೆಗಳು
ಆತ್ಮಹತ್ಯೆಗೆ ಯತ್ನಿಸುವವರು ತೋರುವ ವರ್ತನೆಗಳು ವಿಪರೀತ ಹತಾಶೆ ಭಾವನೆ, ಊಟ, ನಿದ್ರೆ, ಔಷಧ ತ್ಯಜಿಸುವುದು, ಸ್ವನಿಂದನೆ ಮತ್ತು ಸ್ವ-ದ್ವೇಷಿಸುವಿಕೆ, ಕುಟುಂಬ ಮತ್ತು ಸ್ನೇಹಿತರಿಂದ ದೂರವಿರಲು ಬಯಸುವುದು. ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ ಎಂಬ ಬಹಿರಂಗ ಹೇಳಿಕೆ ನೀಡುವುದು. ಅಸಹಾಯಕತೆ ತೋರ್ಪಡಿಸುವುದು, ಬದುಕು ಶೂನ್ಯ, ಬದುಕುವ ಆಸಕ್ತಿಯೇ ಇಲ್ಲ ಎಂದು ಪದೇಪದೆ ಹೇಳುವುದು. ಇತರರ ಸಹಾಯ ಬಯಸುವುದು ಇತ್ಯಾದಿ.
ವೈಜ್ಞಾನಿಕ ಪರಿಹಾರ
ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಲ್ಲಿನ ವರ್ತನೆಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಕೊಡಿಸುವುದು. ಅವರನ್ನು ಒಂಟಿಯಾಗಿ ಬಿಡದೆ ಜೊತೆಯಲ್ಲಿರುವುದು, ಸಂತೋಷವಾಗಿ ನೋಡಿಕೊಳ್ಳುವುದು. ಅಂತಹವರೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಅವರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಸಹಾಯವಾಣಿ ನೆರವು
ಖಿನ್ನತೆ, ಒತ್ತಡ, ಕೌಟುಂಬಿಕ ಸಮಸ್ಯೆ, ಆತ್ಮಹತ್ಯೆ ಆಲೋಚನೆಗಳು, ಮಾದಕವಸ್ತು ವ್ಯಸನ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಮಾನಸಿಕ ಆರೋಗ್ಯ ಸಹಾಯವಾಣಿಗಳಾದ ಓನ್‌ಲೈಫ್, ಟೆಲಿ-ಮನಸ್‌ಗಳನ್ನು ಸಂಪರ್ಕಿಸಿ ಉಚಿತ ಸಲಹೆ ಹಾಗೂ ಸೇವೆ ಪಡೆಯಬಹುದಾಗಿದೆ. ಇಲ್ಲವೇ ಆಪ್ತಸಮಾಲೋಚನಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಕೋಟ್
ಆತ್ಮಹತ್ಯೆ ತಡೆಗಟ್ಟಲು ಸಮುದಾಯದಲ್ಲಿ ಮಾನಸಿಕ ಆರೋಗ್ಯ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಶಿಬಿರ ಆಯೋಜಿಸುವುದು, ಬೀದಿ ನಾಟಕ ಇತ್ಯಾದಿ ಮಾಧ್ಯಮಗಳ ಮೂಲಕ ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯುವ ಕಾರ್ಯವಾಗಬೇಕು. ವಿದ್ಯಾರ್ಥಿಗಳಲ್ಲಿ ಜೀವನ ಕೌಶಲಗಳನ್ನು ಕಲಿಸಬೇಕು.
ಡಾ. ಎಸ್. ಸುರ‌್ಮ, ಮನೋಶಾಸಜ್ಞರು, ಮನೋವಿಜ್ಞಾನ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿವಿ