

ಕಾನಹೊಸಹಳ್ಳಿ: ಪ್ರಸ್ತುತ ಹೆಚ್ಚುತ್ತಿರುವ ತಾಪಮಾನ ತಗ್ಗಿಸಿ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಮರ, ಗಿಡಗಳನ್ನು ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದು ಮುಖ್ಯಶಿಕ್ಷಕ ಬಿ.ತಿಪ್ಪೇಸ್ವಾಮಿ ಹೇಳಿದರು.
ಇದನ್ನೂ ಓದಿ: ತಾಪಮಾನ ಏರಿಕೆಯಿಂದ ಕೃಷಿಗೆ ಆಪತ್ತು
ಸಮೀಪದ ಟಿ.ಕಲ್ಲಹಳ್ಳಿ ಸಹಿಪ್ರಾ ಶಾಲೆಯಲ್ಲಿ ಶಾಲಾ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ಕಚೇರಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಕೋ ಕ್ಲಬ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಕುಡಿವ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಗಿಡ-ಮರಗಳನ್ನು ನೆಟ್ಟು ಪರಿಸರ ರಕ್ಷಿಸಬೇಕಿದೆ. ಈ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಶಿಕ್ಷಕರಾದ ಡಿ.ಗುರುಮೂರ್ತಿ, ಸುಜಯ, ವಿಜಯಲಕ್ಷ್ಮೀ ಮಾತನಾಡಿ, ಗಿಡ, ಮರ ಬೆಳೆಸುವುದರ ಜತೆ ಮನೆ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇದರಿಂದ ವಾಯುಮಾಲಿನ್ಯ ತಡೆಗಟ್ಟಬಹುದು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕರಾದ ಆರ್.ಶಂಕರ ನಾಯಕ್, ಟಿ.ನಾಗೇಶ, ಚಂದ್ರಶೇಖರ, ಅತಿಯಾ ಖಾನಂ ಇತರರಿದ್ದರು.