ಸುರಂಗ ರಸ್ತೆ ನಿರ್ಮಾಣಕ್ಕೆ ಜಾಗತಿಕ ಟೆಂಡರ್: 2 ಪ್ಯಾಕೇಜ್‌ಗಳಲ್ಲಿ ಕಾಮಗಾರಿಗೆ ಬಿಡ್ ಆಹ್ವಾನ

tunnel p
Published on

ಬೆಂಗಳೂರು: ಬಹುನಿರೀಕ್ಷಿತ ಸುರಂಗ ರಸ್ತೆ ಯೋಜನೆ ಅನುಷ್ಠಾನ ಸಂಬಂಧ ಪ್ರಾಜೆಕ್ಟ್ ಜಾರಿ ಹೊಣೆ ಹೊತ್ತಿರುವ ಬೆಂಗಳೂರು ಸ್ಮಾರ್ಟ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ - ಸ್ಮೈಲ್) ಮಂಗಳವಾರ ಉತ್ತರ-ದಕ್ಷಿಣ ಕಾರಿಡಾರ್‌ಗೆ ಜಾಗತಿಕ ಟೆಂಡರ್ ಆಹ್ವಾನಿಸಿದೆ.

ನಗರದ ಸಂಚಾರ ಸಿಕ್ಕುಗೆ ಟನಲ್ ಯೋಜನೆ ಪರಿಹಾರ ಒದಗಿಸಲಿದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದೆ. ಇದಕ್ಕೆ ಪೂರಕವಾಗಿ ಕಳೆದ ತಿಂಗಳು ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈಗ ಯೋಜನೆಯನ್ನು ನಿರ್ಮಾಣ, ಕಾಯಾಚರಣೆ, ನಿರ್ವಹಣೆ, ಹಸ್ತಾಂತರ (ಬಿಒಒಟಿ) ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಟೆಂಡರ್ ಕರೆಯಲಾಗಿದೆ. 16.74 ಕಿ.ಮೀ. ಉದ್ದದ ಟನಲ್ ರಸ್ತೆಗೆ ಒಟ್ಟು 17,698 ಕೋಟಿ ರೂ. ಮೊತ್ತದ ಟೆಂಡರ್‌ಅನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಿ ಅರ್ಹ ಗುತ್ತಿಗೆ ಕಂಪನಿಗಳಿಂದ ಬಿಡ್ ಮಾಡಲು ಕೋರಲಾಗಿದೆ.

ಮೊದಲ ಪ್ಯಾಕೇಜ್ ಅನ್ವಯ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಶೇಷಾದ್ರಿ ರಸ್ತೆಯ ರೇಸ್‌ಕೋರ್ಸ್ ರಸ್ತೆ ಜಂಕ್ಷನ್‌ವರೆಗೆ 8.74 ಕಿ.ಮೀ. ಸುರಂಗ ರಸ್ತೆ ನಿರ್ಮಿಸಲು 8,770 ಕೋಟಿ ರೂ. ಮೊತ್ತ ನಿಗದಿಪಡಿಸಲಾಗಿದೆ. ಎರಡನೇ ಪ್ಯಾಕೇಜ್ ರೇಸ್‌ಕೋರ್ಸ್ ರಸ್ತೆ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ವರೆಗೆ 8 ಕಿ.ಮೀ. ನಿರ್ಮಿಸಲು 8,928 ಕೋಟಿ ರೂ. ನಿಗದಿಯಾಗಿದೆ. ಸುರಂಗ ರಸ್ತೆಯು 3 ಪಥ ಇರಲಿದ್ದು, ಪ್ರವೇಶ/ನಿರ್ಗಮನ ರಾಂಪ್ ತಲಾ 2 ಪಥ ಇರುವಂತೆ ವಿನ್ಯಾಸ ಮಾಡಲಾಗಿದೆ. ಡಿಪಿಆರ್ ಅನ್ವಯ ಕಾಮಗಾರಿ ಪೂರ್ಣಗೊಳಿಸಲು 50 ತಿಂಗಳು ಗಡುವು ವಿಧಿಸಲಾಗಿದೆ.

ಸೆ.2ರವರೆಗೆ ಟೆಂಡರ್‌ಗೆ ಗಡುವು:

ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಹಿತ ಬೃಹತ್ ಕಾಮಗಾರಿ ಕೈಗೊಳ್ಳುವ ನೋಂದಾಯಿತ ಕಂಪನಿಗಳು ಟೆಂಡರ್‌ಗೆ ಬಿಡ್ ಸಲ್ಲಿಸಬಹುದಾಗಿದೆ. ಪೂರ್ವ ಬಿಡ್ ವಿಚಾರಣೆಗೆ ಆ.1 ಕೊನೆಯ ದಿನವಾಗಿರುತ್ತದೆ. ಪೂರ್ವ ಬಿಡ್ ಸಭೆ ಆ.4ರಂದು ನಿಗದಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆ.8ರವರಗೆ ಕಾಲಾವಕಾಶ ನೀಡಲಾಗುತ್ತದೆ. ಟೆಂಡರ್ ಸ್ವೀಕರಿಸಲು ಸೆ.2ರವರೆಗೆ ಗಡುವು ಇರಲಿದ್ದು, ಸೆ.4ರಂದು ತಾಂತ್ರಿಕ ಬಿಡ್ ತೆರೆಯಲು ವೇಳಾಪಟ್ಟಿ ಹಾಕಿಕೊಳ್ಳಲಾಗಿದೆ. ಈ ದಿನಾಂಕದ ಬಳಿಕ ಅರ್ಹ ಬಿಡ್‌ದಾರರಿಗೆ ಟೆಂಡರ್ ವಹಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಬಿ-ಸ್ಪೈಲ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

2030ರ ವೇಳೆಗೆ ಯೋಜನೆ ಪೂರ್ಣ?:

ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಿರುವ ಕಾಮಗಾರಿಗೆ 50 ತಿಂಗಳು ಗಡುವು ವಿಧಿಸಲಾಗಿದೆ. ಈ ಅವಧಿಯಲ್ಲಿ ಸುರಂಗ ಕೊರೆದು ನಂತರ ರಸ್ತೆ ನಿರ್ಮಿಸುವ ಕೆಲಸವನ್ನು ಪೂರ್ಣಗೊಳಿಸಬೇಕಾಗುತ್ತದೆ. ಡಿಪಿಆರ್‌ಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವಾಗ ಕಾಮಗಾರಿ 38 ತಿಂಗಳಲ್ಲಿ ಮುಗಿಯಲಿದೆ ಎಂದು ತಿಳಿಸಲಾಗಿತ್ತು. ಆದರೆ, ಸುರಂಗ ಕೊರೆಯುವಿಕೆಗೆ ಹೆಚ್ಚು ಸಮಯ ಹಿಡಿಯುವ ಕಾರಣ ಒಟ್ಟಾರೆ ಯೋಜನೆ ಪೂರ್ತಿಗೊಳಿಸಲು 50 ತಿಂಗಳಿಗೆ ಏರಿಸಲಾಗಿದೆ. ಅಂದರೆ 2030ರ ನಂತರವೇ ಟನಲ್ ರಸ್ತೆ ಸಂಚಾರಕ್ಕೆ ಸಿದ್ದಗೊಳ್ಳಬಹುದು.

60:40 ಅನುಪಾತದಲ್ಲಿ ಹಣ ಹೂಡಿಕೆ:

ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಗೆ 17,698 ಕೋಟಿ ರೂ. (ಜಿಎಸ್‌ಟಿ ಹೊರತುಪಡಿಸಿ) ವೆಚ್ಚವಾಗಲಿದ್ದು, ಗುತ್ತಿಗೆ ವಹಿಸುವ ಕಂಪನಿ ಹಾಗೂ ಬಿಬಿಎಂಪಿ ಕ್ರಮವಾಗಿ 60:40 ಅನುಪಾತದಲ್ಲಿ ಹಣ ಹೂಡಲಿವೆ. ಬಿಬಿಎಂಪಿಯು ಸಾಲದ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲಿದ್ದು, ಇದಕ್ಕೆ ರಾಜ್ಯ ಸರ್ಕಾರ ಖಾತರಿ ನೀಡಲಿದೆ. ಗುತ್ತಿಗೆ ಕಂಪನಿ ಬೃಹತ್ ಮೊತ್ತ ವೆಚ್ಚ ಮಾಡಲಿರುವ ಹಿನ್ನೆಲೆ 34 ವರ್ಷ ರಿಯಾಯಿತಿ ಸೌಲಭ್ಯ ಪಡೆಯಲಿದೆ. ಅಂದರೆ ಇಷ್ಟು ಅವಧಿಗೆ ಟೋಲ್ ಸಂಗ್ರಹಿಸುವ ಹೊಣೆಯನ್ನು ನೀಡಲಾಗುತ್ತದೆ.

ಟನಲ್ ಯೋಜನೆಯ ಉತ್ತರ-ದಕ್ಷಿಣ ಕಾರಿಡಾರ್ ವಿವರ:

* ಮಾರ್ಗ - ಹೆಬ್ಬಾಳ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ

* ರಸ್ತೆ ಉದ್ದ - 16.74 ಕಿ.ಮೀ. (3 ಪಥ, ರಾಂಪ್​ 2 ಪಥ)

* ಯೋಜನಾ ವೆಚ್ಚ - 17,698 ಕೋಟಿ ರೂಪಾಯಿ

ಪ್ಯಾಕೇಜ್ 1:

* ಮಾರ್ಗ - ಹೆಬ್ಬಾಳ ಎಸ್ಟೀಮ್ ಮಾಲ್‌ನಿಂದ ಶೇಷಾದ್ರಿ ರಸ್ತೆಯ ರೇಸ್‌ಕೋರ್ಸ್ ಜಂಕ್ಷನ್

* ರಸ್ತೆ ಉದ್ದ - 8.74 ಕಿ.ಮೀ.

* ಯೋಜನಾ ಮೊತ್ತ - 8,770 ಕೋಟಿ ರೂ.

ಪ್ಯಾಕೇಜ್ 2:

* ಮಾರ್ಗ - ಶೇಷಾದ್ರಿ ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್

* ರಸ್ತೆ ಉದ್ದ - 8 ಕಿ.ಮೀ.

* ಯೋಜನಾ ಮೊತ್ತ - 8,928 ಕೋಟಿ ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net