ತುಳು ಭಾಷೆಗೆ ಜಾಗತಿಕ ಮಟ್ಟದ ಗೌರವ: ಪಿ.ಎಂ.ರವಿ

P.M.RAVI
Published on

ಮಡಿಕೇರಿ: ಜಗತ್ತಿನಾದ್ಯಂತ ಒಂದೂವರೆ ಕೋಟಿಗೂ ಹೆಚ್ಚು ಜನರು ಮಾತನಾಡುವ ತುಳು ಭಾಷೆಗೆ ಗೂಗಲ್ ಸರ್ಚ್ ಸಂಸ್ಥೆಯು ಮಾನ್ಯತೆ ನೀಡಿದ್ದು, ಇದು ತುಳು ಭಾಷೆಗೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಸದಸ್ಯ ಪಿ.ಎಂ.ರವಿ ಶ್ಲಾಘಿಸಿದ್ದಾರೆ.


ಪಂಚ ದ್ರಾವಿಡ ಭಾಷೆಯಲ್ಲೇ ಅತಿ ಪುರಾತನ ಭಾಷೆಯಾಗಿರುವ ತುಳುವಿಗೆ ೨೬೦೦ ವರ್ಷಗಳ ಇತಿಹಾಸವಿದ್ದು, ಸ್ವಂತ ಲಿಪಿಯನ್ನು ಹೊಂದಿದೆ. ಜೂ.೨೭ರಂದು ಜಾಗತಿಕವಾಗಿ ತುಳು ಭಾಷೆಯನ್ನು ಗೂಗಲ್ ಸಂಸ್ಥೆಯು ತನ್ನ ಟ್ರಾನ್ಸ್ ಲೇಟರ್‌ನಲ್ಲಿ ಸೇರ್ಪಡೆ ಮಾಡಿದ್ದು, ಇಂಗ್ಲಿಷ್ ಅಥವಾ ಯಾವುದೇ ಭಾಷೆಯ ಪದಗಳನ್ನು ಉಲ್ಲೇಖಿಸಿ ತುಳುವಿನಲ್ಲಿ ಅರ್ಥ ಕೇಳಿದರೆ ಅದಕ್ಕೆ ಸರಿಯಾದ ಅರ್ಥ ಕೊಡಬಲ್ಲ ಪದಗಳನ್ನು ತೋರಿಸುತ್ತದೆ. ತುಳು ಮಾತನಾಡುವ ಕರಾವಳಿ ಜನರು ಇಡೀ ಜಗತ್ತಿನಲ್ಲಿದ್ದಾರೆ. ತುಳು ಪ್ರಾದೇಶಿಕ ಭಾಷೆಯಾಗಿದ್ದರು ಹೆಚ್ಚಿನ ಜನ ತುಳುವನ್ನು ತಮ್ಮ ಮಾತೃಭಾಷೆಯನ್ನಾಗಿ ಬಳಸುತ್ತಿದ್ದಾರೆ. ಈಗ ಗೂಗಲ್ ಇಂಜಿನ್‌ನಲ್ಲಿ ತುಳು ಭಾಷೆ ಸೇರ್ಪಡೆಯಾಗಿರುವುದು ತುಳುವಿನ ಮಟ್ಟಿಗೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.


ತುಳು ವಿಕಿಪೀಡಿಯಾದಲ್ಲಿ ೨೦೦೦ಕ್ಕೂ ಹೆಚ್ಚು ಲೇಖನ ಬರಹಗಳು ಸೇರ್ಪಡೆಗೊಂಡಿದ್ದು, ತುಳು ಭಾಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಳಸಿದಷ್ಟು ಗೂಗಲ್ ಇಂಜಿನ್‌ಗೆ ಹತ್ತಿರವಾಗಲಿದೆ. ಗೂಗಲ್ ಟ್ರಾನ್ಸ್ ಲೇಟರ್‌ನಲ್ಲಿ ತುಳು ಭಾಷೆ ಸೇರ್ಪಡೆಯಾಗಿರುವುದರಿಂದ ಜಾಗತಿಕವಾಗಿ ತುಳುವರಿಗೆ ಹಾಗೂ ತುಳು ಭಾಷೆಗೆ ದೊಡ್ಡ ಗೌರವ ಸಿಕ್ಕಿದಂತಾಗಿದೆ. ರಾಜ್ಯದ ಅಧಿಕೃತ ಭಾಷೆ ಮತ್ತು ಸಂವಿಧಾನದ ೮ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರಬೇಕೆಂಬ ತುಳು ಭಾಷಿಕರ ಅನೇಕ ವರ್ಷಗಳ ಕನಸಿಗೆ ಪುಷ್ಟಿ ನೀಡಿದಂತಾಗಿದೆ ಎಂದು ಪಿ.ಎಂ.ರವಿ ಪತ್ರಿಕಾ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net