

ಬೆಳಗಾವಿ: ಕೆಎಲ್‌ಇ ಸಂಸ್ಥೆಯು ಶೈಕ್ಷಣಿಕ ಆರೋಗ್ಯ ಸೇವೆಗಳ ಮೂಲಕ ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆ. ದಾನಿಗಳು ಹಾಗೂ ಮಹಾದಾನಿಗಳಿಂದ ಬೆಳೆದುನಿಂತಿದೆ. ಈ ನಿಟ್ಟಿನಲ್ಲಿ ಕಾರ್ಪೋರೇಟ್ ಕಂಪನಿಗಳು ತಮ್ಮ ಸಾಮಾಜಿಕ ಬದ್ಧತಾ ನಿಧಿಯಡಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಆರ್ಥಿಕ ಸಹಾಯ ನೀಡಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಎಕ್ಸಿಸ್ ಬ್ಯಾಂಕ್‌ನಿಂದ ಸಾಮಾಜಿಕ ಬದ್ಧತಾ ನಿಧಿ ಯೋಜನೆಯಡಿ ಜಿಲ್ಲೆಯ ರಾಯಭಾಗ ತಾಲೂಕಿನ ಯಡ್ರಾವ ಕನ್ನಡ ಶಾಲೆಯ 6 ಕೊಠಡಿಗಳ ನಿರ್ಮಾಣಕ್ಕೆ 50 ಲಕ್ಷ ರೂ. ಚೆಕ್ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಚೆಕ್ ಸ್ವೀಕರಿಸಿ ಮತನಾಡಿದ ಅವರು, ಮುಖ್ಯವಾಗಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ಅಗತ್ಯ ಸೌಲಭ್ಯಗಳಿಗೆ ಆರ್ಥಿಕ ಸಹಾಯ ಒದಗಿಸಬೇಕು. ಎಕ್ಸಿಸ್ ಬ್ಯಾಂಕ್ 50 ಲಕ್ಷ ರೂ. ಸಹಾಯವನ್ನು ರಾಯಬಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗೆ ನೀಡಿರುವುದಕ್ಕೆ ಸಂಸ್ಥೆಯು ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ಕಾರ್ಪೋರೇಟ್ ಕಂಪನಿಗಳ ಕೊಡುಗೆ ಸ್ಮರಣೀಯ:
ಈ ಭಾಗದ ಸುತ್ತಲಿನ ರೈತರು ಮತ್ತು ಕಾರ್ಮಿಕರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಈ ಶಾಲೆಯಿಂದ ಅನುಕೂಲವಾಗುವುದು. ಕೆಎಲ್‌ಇ ಸಂಸ್ಥೆಯು ಇಂದು ಗುಣಾತ್ಮಕ ಶಿಕ್ಷಣ ನೀಡುತ್ತಿದ್ದರೆ ಅದರ ಶಿಕ್ಷಣ ಸಂಸ್ಥೆಗಳಲ್ಲಿ ಸೌಕರ್ಯಗಳು ಅತ್ಯುನ್ನತವಾಗಿವೆ. ಆರ್ಥಿಕವಾಗಿ ಒಂದು ನೆಲೆಯಲ್ಲಿ ಗಟ್ಟಿಯಾಗಿದ್ದರೂ ಮತ್ತೊಂದು ನೆಲೆಯಲ್ಲಿ ಹಲವು ತೊಂದರೆಗಳನ್ನು ಸರಿದೂಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಪೋರೇಟ್ ಕಂಪನಿಗಳ ಕೊಡುಗೆ ಮರೆಯಲಾಗುವುದಿಲ್ಲ ಎಂದು ಸ್ಮರಿಸಿದರು.
ಹುಬ್ಬಳ್ಳಿಯಲ್ಲಿ ಸಾವಿರ ಹಾಸಿಗೆಗಳ ಆಸ್ಪತ್ರೆ ಸಿದ್ಧ:
ಈಚೆಗೆ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಅಥಣಿ ಮೂಲದ ಶಿವಣಗಿ ದಂಪತಿ ಬೃಹತ್‌ದಾನ ನೀಡಿ ಆರೋಗ್ಯಸೇವೆಗೆ ಕೈಜೋಡಿಸಿದ್ದನ್ನು ಮರೆಯುವುದಿಲ್ಲ. ಕಾಳು ಮಾರಿ ಜೀವನ ನಡೆಸುತ್ತಿದ್ದ ಅಥಣಿ ನೀಲವ್ವ ಗಂಗಾವತಿಯ 50 ಸಾವಿರ ರೂ.ಗಳ ದಾನವು ಕೆಎಲ್‌ಇ ಸಂಸ್ಥೆಗೆ ಬಹುದೊಡ್ಡದು ಎಂದು ಸ್ಮರಿಸಿದರು. ಇಂದು ಕೆಎಲ್‌ಇ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಭಾಗಶಃ ಅಂಗ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ಅಷ್ಟೇ ಅಲ್ಲದೆ ಆರೋಗ್ಯ ಸೇವೆಗಳನ್ನು ಗ್ರಾಮೀಣ ಭಾಗದಲ್ಲಿ ವಿಸ್ತರಿಸಿದೆ. ಭವಿಷ್ಯತ್ತಿನಲ್ಲಿ ಅದನ್ನು ಇನ್ನೂ ಹೆಚ್ಚು ಮುಂದುವರೆಸಲಾಗುವುದು. ಹುಬ್ಬಳ್ಳಿಯಲ್ಲಿ ಸಾವಿರ ಹಾಸಿಗೆಗಳ ಆಸ್ಪತ್ರೆ ಸಿದ್ಧಗೊಳ್ಳುತ್ತಿದೆ. ಪುಣೆಯಲ್ಲಿ ಈಗಾಗಲೇ 300 ಹಾಸಿಗೆಗಳ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಎಕ್ಸಿಸ್ ಬ್ಯಾಂಕ್ ಅಧ್ಯಕ್ಷ ಪ್ರಶಾಂತ ಶ್ರೀನಿವಾಸ ಚೆಕ್ ಹಸ್ತಾಂತರಿಸಿ ಮಾತನಾಡಿ, ಸ್ಥಳೀಯ ಭಾಷೆಗಳ ಶಾಲಾ ಕಟ್ಟಡಕ್ಕೆ ಅನುದಾನ ನೀಡುತ್ತಿರುವುದು ಸಂತೋಷವಾಗುತ್ತಿದೆ. ಗ್ರಾಮೀಣ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಅದನ್ನು ಹೋಗಲಾಡಿಸಲು ಗ್ರಾಮೀಣ ಭಾಗದ ಶಾಲೆಗಳಿಗೆ ಅದರಲ್ಲಿಯೂ ಸ್ಥಳೀಯ ಭಾಷಾ ಶಾಲೆಗಳಿಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.
ಕೆಎಲ್‌ಇ ಸಂಸ್ಥೆಯ ಬ್ಯಾಂಕಿಂಗ್ ವ್ಯವಹಾರಗಳ ನಿರ್ದೇಶಕ ಬಸವರಾಜ ಜೇವರ್ಗಿಕರ ಮಾತನಾಡಿ, ಸಂಸ್ಥೆಯ ವ್ಯವಹಾರ ಹಾಗೂ ಸಶಕ್ತ ಆಡಳಿತ ಮಂಡಳಿಯಿಂದಾಗಿ ಎಕ್ಸಿಸ್ ಬ್ಯಾಂಕ್‌ನೊಂದಿಗಿನ ಸಂಬಂಧ ಗಟ್ಟಿಯಾಗಿದೆ ಎಂದರು.
ಹಿರಿಯ ಉಪಾಧ್ಯಕ್ಷ ಅವಧೂತ್ ದೀಕ್ಷಿತ್, ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಕೆಎಲ್‌ಇ ಸಂಸ್ಥೆಯ ಆರ್ಥಿಕ ಸಲಹೆಗಾರ ಬಸವರಾಜ ಜೇವರ್ಗಿಕರ, ಕೆಎಲ್‌ಇ ಆಜೀವ ಸದಸ್ಯ ಮಹಾದೇವ ಬಳಿಗಾರ ಇದ್ದರು.