ಜ್ಞಾನಕ್ಕಾಗಿ 'ಗ್ಲೋಬಲ್​ ಭಗವದ್ಗೀತಾ' ಕ್ವಿಜ್​...

Geeta-1
Published on

ಪರ್ಯಾಯ ಪುತ್ತಿಗೆ ಮಠದಿಂದ ಆಯೋಜನೆ ಪ್ರಥಮ ಬಹುಮಾನ 1 ಲಕ್ಷ ರೂ. ಘೋಷಣೆ

ಪ್ರಶಾಂತ ಭಾಗ್ವತ, ಉಡುಪಿ

ಭಾರತದ ಶ್ರೇಷ್ಠ ಗ್ರಂಥಗಳಲ್ಲೊಂದಾದ ಭಗವದ್ಗೀತೆಯನ್ನು ವಿಶ್ವಾದ್ಯಂತ ಪ್ರಚಾರ ಮಾಡುವ ನಿಟ್ಟಿನಲ್ಲಿ ಉಡುಪಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂಕಲ್ಪಿಸಿದ್ದು, ವಿಶ್ವಕ್ಕೆ ಗೀತಾ ಜ್ಞಾನ ಪಸರಿಸಲು ಗ್ಲೋಬಲ್​ ಭಗವದ್ಗೀತಾ ಕ್ವಿಜ್​ ಆಯೋಜಿಸಿದ್ದಾರೆ.

ಉಡುಪಿ ಶ್ರೀಕೃಷ್ಣನ ಸೇವಾ ಕೈಂಕರ್ಯದ ಎರಡು ವರ್ಷದ ತಮ್ಮ ಚತುರ್ಥ ಪರ್ಯಾಯವನ್ನು ವಿಶ್ವ ಗೀತಾ ಪರ್ಯಾಯ ಎಂದೇ ಆಚರಿಸುತ್ತಿರುವ ಶ್ರೀಗಳು, ಅದರ ಪ್ರಮುಖ ಭಾಗವಾಗಿ ಕೋಟಿ ಗೀತಾ ಲೇಖನ ಯಜ್ಞ ನಡೆಸುತ್ತಿದ್ದಾರೆ. ಬೃಹತ್​ ಗೀತೋತ್ಸವದ ಮುಂದುವರಿದ ಭಾಗವಾಗಿ ಸುಗುಣೇಂದ್ರ ಶ್ರೀಪಾದರು ಜಾಗತಿಕ ಭಗವದ್ಗೀತಾ ಸ್ಪರ್ಧೆ ಹಮ್ಮಿಕೊಂಡಿದ್ದಾರೆ.

444

ಎರಡು ವಿಭಾಗ, ಮೂರು ಸುತ್ತು

ಗೀತಾ ಸ್ಪರ್ಧೆಯು 18 ವರ್ಷಕ್ಕಿಂತ ಕೆಳಗಿನ, 18 ವರ್ಷಕ್ಕಿಂತ ಮೇಲ್ಪಟ್ಟ ಎರಡು ವಿಭಾಗದಲ್ಲಿ ಹಾಗೂ ಮೂರು ಸುತ್ತುಗಳಲ್ಲಿ ನಡೆಯಲಿದೆ. ಮೊದಲ ಸುತ್ತು ಜ.14ರಿಂದ ಜ.20, ಎರಡನೇ ಸುತ್ತು ಜ.25 ಹಾಗೂ ಮೂರನೇ ಸುತ್ತು ಜ.26ರಿಂದ ಫೆ.1ರ ವರೆಗೆ ನಡೆಯಲಿದೆ. ಫೆ. 6ರಂದು ಬಹುಮಾನ ವಿತರಣೆ ನಡೆಯಲಿದೆ. ಭಾಗವಹಿಸಿದ ಎಲ್ಲರಿಗೂ ಡಿಜಿಟಲ್​ ಪ್ರಮಾಣ ಪತ್ರ ನೀಡಲಾಗುತ್ತಿದೆ. ಪ್ರಥಮ ಬಹುಮಾನ 1 ಲಕ್ಷ ರೂ. ಸೇರಿ ಒಟ್ಟು 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

Geeta-3
ಕ್ಯುಆರ್​ ಕೋಡ್​.

ಕನ್ನಡ, ಇಂಗ್ಲಿಷ್​ ಭಾಷೆಯಲ್ಲಿ ಸ್ಪರ್ಧೆ

ಸ್ಪರ್ಧೆಯು ಕನ್ನಡ ಹಾಗೂ ಇಂಗ್ಲಿಷ್​ ಭಾಷೆಯಲ್ಲಿ ನಡೆಯಲಿದೆ. ಭಗವದ್ಗೀತೆಯನ್ನು ಆನ್​ಲೈನ್​ನಲ್ಲಿಯೇ ಓದಿ, ಆನ್​ಲೈನ್​ ಮೂಲಕವೇ ಸ್ಪರ್ಧೆ ಮಾಡಬಹುದಾಗಿದೆ. ಬಹು ಆಯ್ಕೆಯ ಪ್ರಶ್ನೆಗಳು ಇರಲಿದ್ದು, ಎಲ್ಲರಿಗೂ ಅವಕಾಶ ನೀಡಲಾಗಿದೆ. ನೋಂದಣಿಗೆ ಜ.20 ಕಡೆಯ ದಿನವಾಗಿದೆ.

ಶಾಲೆಗಳಿಗೆ ನೋಂದಣಿ ಉಚಿತ

ಶಾಲೆಗಳು ಮತ್ತು ವಿದ್ಯಾಪೀಠದಿಂದ ಸಾಮೂಹಿಕ ನೋಂದಣಿ ಉಚಿತವಾಗಿದ್ದು, ಇತರರಿಗೆ ಒಂದು ಬಾರಿ ನೋಂದಣಿಗೆ 199 ರೂ. ಶುಲ್ಕ ವಿಧಿಸಲಾಗಿದೆ. ಮಾಹಿತಿಗಾಗಿ ವಾಟ್ಸಾಪ್​ ನಂಬರ್​ 7795536912, 9481904283 ಹಾಗೂ vishwagitaforum@gmail.com ಇ-ಮೇಲ್ ಸಂಪರ್ಕಿಸಬಹುದು ಎಂದು ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ ತಿಳಿಸಿದೆ.

ಯುವ ಸಮುದಾಯದ ಏಳಿಗೆಯ ಉದ್ದೇಶ

Geeta-4
ಭಗವದ್ಗೀತೆಯು ಭಗವಾನ್​ ಶ್ರೀಕೃಷ್ಣನ ಸಮ್ಮುಖದಿಂದ ಪ್ರಕಟಿತ ಸಂದೇಶವಾಗಿದ್ದು, ಪ್ರಪಂಚದ ಎಲ್ಲ ಮಾನವರ ಜೀವನಕ್ಕೆ ಪೂರಕವಾಗಿ ಇರುವಂತಹ ಶ್ರೇಷ್ಠ ಗ್ರಂಥವಾಗಿದೆ. ಹೇಗೆ ಬದುಕಬೇಕು, ಬದುಕು ಹೇಗಿರಬೇಕು ಎಂದು ಜ್ಞಾನದ ಹೂರಣವೇ ಹೊಂದಿರುವ ತ್ರೈಕಾಲಿಕ ಹಾಗೂ ಅಜರಾಮರ ಸಂದೇಶವದು. ಎಲ್ಲರೂ ಗೀತೆಯ ಸಾರ ತಿಳಿದು, ಜೀವನ ಸ್ಫೂರ್ತಿ ಪಡೆಯಬೇಕು ಎನ್ನುವುದು ಶ್ರೀಮನ್​ಮಧ್ವಾಚಾರ್ಯರ ಸತ್ಸಂಕಲ್ಪವೂ ಆಗಿದ್ದು, ಜಾಗತಿಕ ಭಗವದ್ಗೀತಾ ಸ್ಪರ್ಧೆ ಆಯೋಜಿಸಲಾಗಿದೆ. ಗೀತೆಯನ್ನು ಪಠಿಸುವುದರಿಂದ ವಿದ್ಯಾರ್ಥಿಗಳಿಗೂ ಜೀವನದ ಸತ್ಯ, ಸನಾತನ ಧರ್ಮದ ಮಹತ್ವ ಅರಿವಾಗುತ್ತದೆ. ದೇಶದ ಸಂಪತ್ತಾಗಿರುವ ಇಂದಿನ ಯುವ ಸಮುದಾಯದ ಏಳಿಗೆಯ ಏಕೈಕ ಉದ್ದೇಶದಿಂದ ಗೀತಾ ಕ್ವಿಜ್​ ಹಮ್ಮಿಕೊಳ್ಳಲಾಗಿದೆ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ದೊಡ್ಡ ಬಹುಮಾನವಿದ್ದರೆ ಅದನ್ನು ಗೆಲ್ಲುವ ಉತ್ಸಾಹದಿಂದ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತದೆ. ಯುವ ಸಮುದಾಯ ಸೇರಿದಂತೆ ಎಲ್ಲ ವಯೋಮಾನದವರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಾಗಲು 1 ಲಕ್ಷ ರೂ. ಪ್ರಥಮ ಬಹುಮಾನ ಘೋಷಿಸಲಾಗಿದೆ. ಸ್ಪರ್ಧೆಯ ಕಾರಣದಿಂದಾದರೂ ಮಕ್ಕಳು ಹಾಗೂ ಯುವ ಜನರು ಗೀತೆಯನ್ನು ಪಠಿಸಲಿ, ಗೀತಾಚಾರ್ಯನಾದ ಶ್ರೀಕೃಷ್ಣನ ಅನುಗ್ರಹ ಲಭಿಸಲಿ ಎನ್ನುವುದೇ ನಮ್ಮ ಸದಿಚ್ಛೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net