ಸಿನಿಮಾ ವೀಕ್ಷಣೆಯಿಂದ ಜಾಗತಿಕ ಅರಿವು

bnk2
Published on

ಬಣಕಲ್: ಜಾಗತಿಕ ಸಿನಿಮಾಗಳ ವೀಕ್ಷಣೆಯಿಂದ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸಿಲ್ವಾ ಹೇಳಿದರು.

ಮನುಜಮತ ಸಿನಿಯಾನ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಎರಡು ದಿನ ಮೂಡಿಗೆರೆ ಸಿನಿಮಾ ಹಬ್ಬದಲ್ಲಿ ಮಾತನಾಡಿ, ಮನುಜಮತ ಸಿನಿಯಾನ 2016ರಲ್ಲಿ ಜಾಗತಿಕ ಸಿನಿಮಾಗಳ ವೀಕ್ಷಣೆ ಮತ್ತು ಸಂವಾದಕ್ಕಾಗಿ ಹುಟ್ಟಿಕೊಂಡ ಸಿನಿಮಾಸಕ್ತರ ತಂಡ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಸಿನಿಮಾಸಕ್ತರೊಂದಿಗೆ ಸೇರಿ ಎರಡು ದಿನ ನಿರ್ದಿಷ್ಟ ವಿಷಯಾಧಾರಿತ ಸಿನಿಮಾ ಹಬ್ಬಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಪ್ರದೀಪ್ ಕೆಂಜಿಗೆ ಮಾತನಾಡಿ, ಸಿನಿಮಾ ಮತ್ತು ನಾಟಕ ಮುಂತಾದ ಚಟುವಟಿಕೆಗಳಿಗೆ ಪೂರಕವಾಗಿರುವ ಸಭಾಂಗಣ ಮತ್ತು ವಸತಿಗಹ ನಿರ್ಮಾಣವಾಗುತ್ತಿದ್ದು , ಕೆಲ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸಿನಿಮಾ ಪ್ರದರ್ಶನ, ನಾಟಕ, ವಿಚಾರ ಸಂಕಿರಣ, ಸಂವಾದ, ಕಾರ್ಯಾಗಾರಗಳು ನಿರಂತರವಾಗಿ ನಡೆಯಲಿದೆ ಎಂದರು.

ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಅವರಿಂದ ಸಿನಿಮಾದಲ್ಲಿ ಧ್ವನಿ ಬೆಳಕು, ಸಿನಿಮಾಟೋಗ್ರಫಿ ಕುರಿತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಅಬ್ಬಾಸ್ ಅಮೀನಿ ನಿರ್ದೇಶನದ ಎಂಡ್ ಲೆಸ್ ಬಾರ್ಡರ್ಸ್‌, ಇಂಗ್ಮರ್ ಬರ್ಗ್ ಮೆನ್ ನಿರ್ದೇಶನದ ಶೇಮ್, ಎಲೆಮ್ ಕ್ಲಿಮೋವ್ ನಿರ್ದೇಶನದ ಕಮ್ ಆಂಡ್ ಸೀ ಸಿನಿಮಾ ಹಾಗೂ ಯುವಲ್ ಅವ್ರಹಾಮ್, ಬಾಸೆಲ್ ಅಡ್ರಾ ಮತ್ತು ಹಂದಾನ್ ಬಳ್ಳಾಲ್ ನಿರ್ದೇಶನದ ನೋ ಅದರ್ ಲ್ಯಾಂಡ್ ಸಾಕ್ಷೃಚಿತ್ರದ ಪ್ರದರ್ಶನ ನಡೆಯಿತು.

ಕಲಾವಿದ ಮತ್ತು ತೇಜಸ್ವಿ ಒಡನಾಡಿ ಬಾಪುದಿನೇಶ್ ಮಾತನಾಡಿ, ಅಂತರಾಷ್ಟ್ರೀಯ ಸಿನಿಮಾಗಳ ವೀಕ್ಷಣೆಯಿಂದ ಆ ನೆಲದ ಜನ ಜೀವನ, ಸಂಕಷ್ಟ, ರಾಜಕೀಯದ ಚಿತ್ರಣ ನೋಡುಗರ ಎದೆ ದಾಟುತ್ತದೆ. ಸಿನಿಮಾ ಪರಿಣಾಮಕಾರಿ ಮಾಧ್ಯಮವಾಗಿದ್ದು, ಹೊಸ ನೋಟವನ್ನು ನೀಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net