

ಸಿದ್ದಾಪುರ: ಜಾಗತಿಕ ಮಟ್ಟದ ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್ ಪ್ರಶಸ್ತಿ ಪುರಸ್ಕೃತ ತಾಲೂಕಿನ ಉಂಬಳಮನೆ ಹೋಬಳಿಯ ಹುಣಸೇಕೊಪ್ಪ ಗ್ರಾಮದ ಕಲ್ಕಟ್ಟೆಯ ರಮಾಕಾಂತ ರಾಮಚಂದ್ರ ಹೆಗಡೆ ಅವರನ್ನು ಪಟ್ಟಣದ ತೋಟಗಾರಿಕಾ ಇಲಾಖೆಯಲ್ಲಿ ಗುರುವಾರ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿ, ನಿಧಾನ ಸೊರಗು ರೋಗ ತಡೆದುಕೊಳ್ಳುವ ಶಕ್ತಿಯುಳ್ಳ ಸಿಗಂದಿನಿ ಹೆಸರಿನ ಕಾಳುಮೆಣಸಿನ ತಳಿಯನ್ನು ಕಳೆದ ಎಂಟು ವರ್ಷಗಳಿಂದ ನರ್ಸರಿ ಮೂಲಕ ಬೆಳೆದು ರಾಜ್ಯದ ವಿವಿಧ ಭಾಗಗಳಿಗೆ ಬೇಡಿಕೆಗನುಗುಣವಾಗಿ ಪೂರೈಸಲಾಗುತ್ತಿದೆ. ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಭಾಗಗಳಿಂದ ಈ ತಳಿಗೆ ಅತ್ಯಧಿಕ ಬೇಡಿಕೆಯಿದೆ. ಪ್ರಸಕ್ತ ವರ್ಷ ಈಗಾಗಲೇ 1.40 ಲಕ್ಷ ಗಿಡಗಳನ್ನು ಪೂರೈಸಲಾಗಿದೆ. ಮುಂದಿನ ವರ್ಷ ಬೆಳೆಸಬಹುದಾದ ಗಿಡಗಳಿಗೆ ಈಗಾಗಲೇ ಮುಂಗಡ ಬುಕಿಂಗ್ ಆಗಿದೆ. ಐಐಎಸ್‌ಆರ್ ನಿವೃತ್ತ ಹಿರಿಯ ವಿಜ್ಞಾನಿ ಡಾ. ಎಂ.ಎನ್. ವೇಣುಗೋಪಾಲ ಅವರು ಮಾರ್ಗದರ್ಶನ ನೀಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ಸೆ.12ರಂದು ರಾಷ್ಟ್ರಪತಿಗಳಿಂದ 1.50ಲಕ್ಷ ರೂ.ಗೌರವ ಧನದೊಂದಿಗೆ ಜಾಗತಿಕ ಮಟ್ಟದ ಪ್ರಶಸ್ತಿ ಸ್ವೀಕರಿಸಿದ್ದು ಸಂತಸ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾರ್ಸಿಕಟ್ಟಾ ಅಘನಾಶಿನಿ ಸ್ಪೈಸಸ್ ಪ್ರೊಡ್ಯೂಸರ್ ಕಂಪನಿಯ ಅಧ್ಯಕ್ಷ ಎಸ್.ಆರ್. ಹೆಗಡೆ ಕುಂಬಾರಕುಳಿ ಮಾತನಾಡಿ, ರಮಾಕಾಂತ ಹೆಗಡೆ ಅವರು ಉತ್ಪಾದಿಸುತ್ತಿರುವ ಸಿಗಂದಿನಿ ಕಾಳುಮೆಣಸಿನ ತಳಿಯು ಔಷಧೀಯ ಗುಣ ಹೊಂದಿದೆ. ಇದೀಗ ಅವರಿಗೆ ಜಾಗತಿಕ ಮಟ್ಟದ ಪ್ರಶಸ್ತಿ ದೊರೆತಿದ್ದರಿಂದ ಉಳಿದ ರೈತರಿಗೂ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆ ದೊರೆತಂತಾಗಿದೆ ಎಂದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಎಚ್.ಜಿ., ತೋಟಗಾರಿಕಾ ಇಲಾಖೆಯ ಅಧಿಕಾರಿ ಮಹಾಬಲೇಶ್ವರ, ನಿರಂಜನ ಭಟ್ಟ, ದಿನೇಶ ಹೆಗಡೆ, ಜಿ.ಪಿ. ಹೆಗಡೆ ಇತರರಿದ್ದರು.