ನಿಷ್ಪಕ್ಷಪಾತದ ಮನೋಧರ್ಮ ಮೈಗೂಡಿಸಿಕೊಳ್ಳಿ: ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಸಲಹೆ

Global AIDS Day mandya
Published on

ಮಂಡ್ಯ: ಸರ್ಕಾರ ಎಲ್ಲ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕ ಪ್ರಾರಂಭ ಮಾಡಲು ನಿರ್ದೇಶನ ನೀಡಿದೆ. ಆದ್ದರಿಂದ ನಿಷ್ಪಕ್ಷಪಾತ ಹಾಗೂ ಸ್ವಯಂ ಪ್ರೇರಿತವಾಗಿರುವ ರೆಡ್‌ಕ್ರಾಸ್ ಸಂಸ್ಥೆಯ ಮನೋಧರ್ಮವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ತಿಳಿಸಿದರು.

ನಗರದ ಪಿಇಎಸ್ ಕಾನೂನು ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಯುವ ರೆಡ್‌ಕ್ರಾಸ್ ಘಟಕ, ಪಿಇಎಸ್ ಕಾನೂನು ಕಾಲೇಜು ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಜಾಗತಿಕ ಏಡ್ಸ್ ದಿನ ಹಾಗೂ ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನ ಉದ್ಘಾಟಿಸಿ ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆಯ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಮಾಜಕ್ಕೆ ಒಳ್ಳೆಯ ವಾತಾವರಣ ಉಂಟು ಮಾಡಿ ಎಂದು ಸಲಹೆ ನೀಡಿದರು.

ಎಲ್ಲ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಬೇಕು. ಸಮಾಜದಲ್ಲಿ ತನ್ನನ್ನು ತಾವು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಬೇಕು.ಯಾವುದೇ ಫಲವನ್ನು ಅಪೇಕ್ಷಿಸದೆ ದಾನ ಮಾಡುವುದೇ ನಿಜವಾದ ದಾನ. ಆದ್ದರಿಂದ ದಯೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ನಮ್ಮದು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಮಾನವೀಯ ಸೇವಾ ಸಂಸ್ಥೆಯಾಗಿದೆ. ಇದನ್ನು 1863ರಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಸ್ಥಾಪಿಸಲಾಯಿತು. ರೆಡ್‌ಕ್ರಾಸ್ ಚಳವಳಿಯ ಪಿತಾಮಹ ಜೀನ್ ಹೆನ್ರಿ ಡ್ಯುನಾಂಟ್ ಎಂದು ಅವರು, ಎರಡು ಬಾರಿ ರೆಡ್‌ಕ್ರಾಸ್ ಸಂಸ್ಥೆಗೆ ನೋಬೆಲ್ ಪ್ರಶಸ್ತಿ ಸಿಕ್ಕಿದೆ ಎಂದು ತಿಳಿಸಿದರು.

ಪಿಇಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಜೆ.ಯೋಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಏಡ್ಸ್ ದಿನದ ಮಹತ್ವ ಕುರಿತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎನ್.ಸಿ.ವೇಣುಗೋಪಾಲ್ ಹಾಗೂ ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನ ಕುರಿತು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು ಉಪನ್ಯಾಸ ನೀಡಿದರು.

ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಟಿ.ನಾರಾಯಣಸ್ವಾಮಿ, ಮಂಗಲ ಎಂ.ಯೋಗೇಶ್, ಪಿಇಎಸ್ ಕಾನೂನು ಕಾಲೇಜು ಪ್ರಾಧ್ಯಾಪಕರಾದ ಯಮುನಾವತಿ, ಜಯಕುಮಾರ್, ಪ್ರಮೋದ್‌ಕುಮಾರ್, ಸುಭಾಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net