ನಕಲಿ ಚಿನ್ನ ಅಡವಿಟ್ಟು 20 ಲಕ್ಷ ರೂ.ಸಾಲ

185257-akshayatrutiya-buy-gold-only-at-1-rs4.jpg
Published on


-ಆರೋಪಿಯನ್ನು ಬಂಧಿಸಿದ ಗೋಕಾಕ ಪೊಲೀಸರು
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗೋಕಾಕ ನಗರದ ಐಸಿಐಸಿಐ ಬ್ಯಾಂಕ್‌ನಲ್ಲಿ 437 ಗ್ರಾಂ ನಕಲಿ ಬಂಗಾರದ ಆಭರಣಗಳನ್ನು  ಅಡವಿಟ್ಟು 20 ಲಕ್ಷ ರೂ. ಸಾಲ ಪಡೆದುಕೊಂಡಿದ್ದ ಪ್ರಕರಣದ ಅಡಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋಕಾಕ ತಾಲೂಕಿನ ಗುಜನಟ್ಟಿ ಗ್ರಾಮದ ಕಲ್ಪಪ್ಪ ಹಣಮಂತ ಬ್ಯಾಕೂಡ (55) ಬಂಧಿತ ವ್ಯಕ್ತಿ.
ಗೋಕಾಕ ನಗರದ ಐಸಿಐಸಿಐ ಬ್ಯಾಂಕ್‌ನಲ್ಲಿ  2022 ಸಪ್ಟಂಬರ್‌ನಿಂದ ನವಂಬರ್ 11ರವರೆಗ ಹಂತ ಹಂತವಾಗಿ 437.04 ಗ್ರಾಂ ನಕಲಿ ಬಂಗಾರದ ಆಭರಣಗಳನ್ನು  ಅಡವಿಟ್ಟು 20,26,271 ರೂ. ಸಾಲ ಪಡೆದುಕೊಂಡಿದ್ದನು. ತದನಂತರ ಬ್ಯಾಂಕಿನ ಲೆಕ್ಕಪರಿಶೋಧನೆ ಸಂದರ್ಭದಲ್ಲಿ  ಕಲ್ಪಪ್ಪ ಹಣಮಂತ ಬ್ಯಾಕೂಡ ಅಡವಿಟ್ಟಿದ 437.04 ಗ್ರಾಂ  ಬಂಗಾರದ ಆಭರಣಗಳನ್ನು ಪರಿಶೀಲನೆ ನಡೆಸಿದಾಗ ನಕಲಿ ಎಂದು ತಿಳಿದು ಬಂದಿತ್ತು. ಈ ಕುರಿತು ಕಲ್ಲಪ್ಪನಿಗೆ ಬ್ಯಾಂಕಿನಿಂದ ನೋಟೀಸ್ ವಿಚಾರಣೆ ನಡೆಸಿದಾಗ ತೆಗೆದುಕೊಂಡಿರುವ ಅಸಲಿ ಸಾಲ ಮತ್ತು ಶೇ.14ರಷ್ಟು ಬಡ್ಡಿ ಸೇರಿ ಹಣವನು ತುಂಬುತ್ತೇನೆ ಎಂದು ಹೇಳಿದ್ದನು. ಆದರೆ, ಇಲ್ಲಿಯವರೆಗೆ ನಕಲಿ ಬಂಗಾರದ ಆಭರಣದ ಮೇಲೆ ಪಡೆದುಕೊಂಡಿರುವ ಸಾಲ ಮತ್ತು ಬಡ್ಡಿ ಕಟ್ಟದೇ ನಮ ಬ್ಯಾಂಕಿಗೆ ಮೋಸ ಮಾಡಿದ್ದಾನೆ ಎಂದು ಬ್ಯಾಂಕ್ ವ್ಯವಸ್ಥಾಪಕ ಸಾಗರ ಅನಂತ ಓತಾರಿ ಜ.20ರಂದು ಗೋಕಾಕ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದನು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು  ಗುಜನಟ್ಟಿ ಗ್ರಾಮದ ಕಲ್ಪಪ್ಪ ಹಣಮಂತ ಬ್ಯಾಕೂಡ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಬ್ಯಾಂಕಿನ ಚಿನ್ನಾಭರಣ ನಕಲಿ, ಅಸಲಿ ಪರಿಶೀಲನೆ ನಡೆಸಿದವನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net