ಮಂಗಳೂರಿಗೆ ಗಾಜು ಉತ್ಪಾದನಾ ಕಂಪನಿ, 2,527 ಕೋಟಿ ರೂ. ಹೂಡಿಕೆ ಯೋಜನೆ

Mangalore glass company
Published on

ಹರೀಶ್ ಮೋಟುಕಾನ ಮಂಗಳೂರು

ಮಂಗಳೂರಿನಲ್ಲಿ ಗಾಜು ಉತ್ಪಾದನಾ ಘಟಕ ಸ್ಥಾಪನೆಗೆ 2,527 ಕೋಟಿ ರೂಪಾಯಿ ಹೂಡಿಕೆ ಮಾಡಲು ನವದೆಹಲಿಯ ‘ಗೋಲ್ಡ್ ಪ್ಲಸ್’ ಕಂಪನಿ ಒಲವು ತೋರಿಸಿದ್ದು, ಮಾತುಕತೆ ಯಶಸ್ವಿಯಾಗಿ ಉದ್ಯಮ ಆರಂಭಗೊಂಡರೆ ಸುಮಾರು 500 ಮಂದಿಗೆ ಉದ್ಯೋಗವಕಾಶ ಲಭ್ಯವಾಗುವ ನಿರೀಕ್ಷೆ ಇದೆ.

ರಾಜ್ಯದಲ್ಲಿ 13,487 ಕೋಟಿ ರೂ. ಬಂಡವಾಳ ಹೂಡಿಕೆಯಾಗುವ 10 ಹೊಸ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಇತ್ತೀಚೆಗೆ ಅನುಮೋದನೆ ನೀಡಿದೆ. ಇದರಲ್ಲಿ ಮಂಗಳೂರಿನ ಗಾಜು ಉತ್ಪಾದನಾ ಉದ್ಯಮ ಯೋಜನೆಯೂ ಸೇರಿದೆ.

ಕೈಗಾರಿಕಾ ಇಲಾಖೆ ಮೂಲಗಳ ಪ್ರಕಾರ, 34 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದೇಶದ ಪ್ರತಿಷ್ಠಿತ ಗೋಲ್ಡ್ ಪ್ಲಸ್ ಗ್ಲಾಸ್ ಇಂಡಸ್ಟ್ರಿ ಕಂಪನಿ ಪ್ರತಿದಿನ 1,250 ಮೆಟ್ರಿಕ್ ಟನ್ ಗಾಜು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ಲೋಟ್ ಗ್ಲಾಸ್, ಆರ್ಕಿಟೆಕ್ಚರಲ್ ಗ್ಲಾಸ್, ಆಟೋಮೊಟಿವ್ ಗ್ಲಾಸ್, ಇಂಡಸ್ಟ್ರಿಯಲ್ ಗ್ಲಾಸ್, ಮ್ಯಾಜಿಕ್ ಗ್ಲಾಸ್, ಆಕೋಸ್ಟಿಕ್ ಗ್ಲಾಸ್‌ಗಳನ್ನು ಉತ್ಪಾದಿಸುತ್ತಿದೆ.

ಮಂಗಳೂರು ಆಯ್ಕೆ ಏಕೆ?: ಗಾಜು ಉತ್ಪಾದನೆಗೆ ಅಗತ್ಯವಾದ ಸಿಲಿಕಾ ಅದಿರು ಕರಾವಳಿ ಸಹಿತ ರಾಜ್ಯದ ವಿವಿಧ ಕಡೆ ಹಾಗೂ ಕೇರಳ ಭಾಗದಲ್ಲಿ ಲಭ್ಯವಿರುವ ಕಾರಣ ಮಂಗಳೂರಿನಲ್ಲಿ ಕೈಗಾರಿಕೆ ಆರಂಭಕ್ಕೆ ಕಂಪನಿ ಆಸಕ್ತಿ ತೋರಿಸಿದೆ. ಸದ್ಯದ ಮಾಹಿತಿ ಪ್ರಕಾರ ಮಂಗಳೂರಿನಲ್ಲಿ ಇದಕ್ಕೆ 200 ಎಕರೆ ಭೂಮಿ ಅಗತ್ಯವಿದ್ದು, ದೇಶ-ವಿದೇಶಕ್ಕೆ ಗಾಜು ಸರಬರಾಜು ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಎನ್‌ಎಂಪಿಟಿ ಸಮೀಪದಲ್ಲಿಯೇ ಜಮೀನು ಭೂಮಿ ನೀಡುವಂತೆ ಕಂಪನಿಯು ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ನಗರದಲ್ಲಿ ಅಷ್ಟು ಭೂಮಿ ದೊರೆಯುವುದು ಅನುಮಾನವಾಗಿರುವುದರಿಂದ ಜಿಲ್ಲೆಯ ಇತರ ಭಾಗದಲ್ಲಿ ಒದಗಿಸುವ ಚಿಂತನೆ ನಡೆಸಲಾಗುತ್ತಿದೆ.

ಕೈಗಾರಿಕೆಗಳಿಗೆ ನೀಡಿರುವ ಭೂಮಿ: ಮಂಗಳೂರು 66,544.4 ಎಕರೆ ಪುತ್ತೂರು 21.40 ಎಕರೆ ಮೂಡುಬಿದಿರೆ 9.88 ಎಕರೆ ಬಂಟ್ವಾಳ 206.13 ಎಕರೆ ಬೆಳ್ತಂಗಡಿ 0.9 ಎಕರೆ

ಮಂಗಳೂರಿನಲ್ಲಿ ಗಾಜು ಉತ್ಪಾದನೆಯ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ನವದೆಹಲಿ ಮೂಲದ ಗೋಲ್ಡ್ ಪ್ಲಸ್ ಕಂಪನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಆರಂಭಿಕ ಸಿದ್ಧತೆಯಷ್ಟೇ ನಡೆದಿದ್ದು, ಇತರ ಪ್ರಕ್ರಿಯೆಗಳು ಇನ್ನಷ್ಟೇ ನಡೆಯಬೇಕಾಗಿದೆ. ಗೋಕುಲ್‌ದಾಸ್ ನಾಯಕ್, ದ.ಕ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net