

ಹುಬ್ಬಳ್ಳಿ: ಇಲ್ಲಿಯ ಇಂದಿರಾ ಗಾಜಿನ ಮನೆ ಹುಬ್ಬಳ್ಳಿಯ ಹೆಗ್ಗುರುತುಗಳಲ್ಲಿ ಒಂದಾಗಿದೆ. ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಗಾಜಿನ ಮನೆ ಸದ್ಯ ತಗಡಿನ ಶೆಡ್ ರೀತಿಯಾಗಿದೆ. ಮಳೆ ಬಂದರೆ ಸೋರುತ್ತಿದೆ. ಹಾಗೆಂದು ಇದರ ನಿರ್ವಹಣೆ ಮಾಡುತ್ತಿಲ್ಲವೇ? ಎನ್ನಬೇಡಿ.
ಇತ್ತೀಚೆಗಷ್ಟೇ ಸ್ಮಾರ್ಟ ಸಿಟಿ ಯೋಜನೆಯಡಿ ಸುಮಾರು ಮೂರು ಕೋಟಿ ರೂ. ಸುರಿದು ಇದನ್ನು ನವೀಕರಣ ಮಾಡಲಾಗಿದೆಯಂತೆ. ಗಾಜುಗಳ ಒಡೆದು, ಜಂಗು ತಿನ್ನುತ್ತಿದ್ದ ಕಂಬಗಳಿಗೆ ಹೊಸ ರೂಪ ನೀಡಲಾಗಿದೆ. ಗಾಜಿನ ಮನೆ ಕಟ್ಟಡ ಹಾಗೂ ಅವರಣವನ್ನು ಸ್ಮಾರ್ಟ ಸಿಟಿ ಕಂಪನಿಯು ಅಭಿವೃದ್ಧಿ ಪಡಿಸಿದೆ. ಸಂಪೂರ್ಣ ಗಾಜುಮಯವಾಗಿದ್ದ ಮನೆಯನ್ನು ಈಗ ಬಹುತೇಕ ತಗಡಿನ ಹೊದಿಕೆ ಹಾಕಲಾಗಿದೆ. ಕೆಲ ಭಾಗದಲ್ಲಿ ಮಾತ್ರ ಗಾಜು ಕಾಣಿಸುತ್ತಿದೆ.
ಸುಧಾರಣೆ ಕಾರ್ಯ ಕೈಗೊಂಡು ಒಂದೆರಡು ವರ್ಷವೂ ಗತಿಸಿಲ್ಲ. ಆಗಲೇ ಸೋರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಜೋರು ಮಳೆಗೆ ಕೆಲವೆಡೆ ಧೋ ಎಂದು ನೀರು ಸುರಿಯುತ್ತದೆ.
ಭಾನುವಾರ ಗಾಜಿನ ಮನೆಯಲ್ಲಿ ಏರ್ಪಾಟಾಗಿದ್ದ ಗೃಹ ನಿರ್ಮಾಣ ಕಾರ್ಮಿಕರ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.
ಆಗ ಗಾಜಿನ ಮನೆಯ ಮಾಳಿಗೆಯಿಂದ ನೀರು ಸೋರಲು ಆರಂಭಿಸಿತು. ವೇದಿಕೆಯ ಮೇಲೆ ಬಟ್ಟೆಯ ಪರದೆ ಇತ್ತು. ಆದರೆ, ಉಳಿದ ಕಡೆ ಅಲ್ಲಲ್ಲಿ ಮಳೆ ನೀರು ಸೋರಿ ಜನರು ಸರಿದು ಕುಳಿತುಕೊಳ್ಳುವ ಪ್ರಸಂಗ ಬಂತು.
ಮೊದಲೆಲ್ಲ ಎಷ್ಟೊಂದು ಸುಂದರವಾಗಿದ್ದ ಗಾಜಿನ ಮನೆ ಈಗ ಎಷ್ಟು ಹಾಳಾಗಿದೆ ನೋಡಿ, ಸಾಲದ್ದಕ್ಕೆ ಮಳೆ ಬಂದರೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಾಮಿರ್ಕರು ಮಾತನಾಡಿಕೊಳ್ಳುವಂತಾಯಿತು.