

ಪ್ರಾಕೃತಿಕ ಸೌಂದರ್ಯದ ಮೂಲಕ ಗಮನ ಸೆಳೆದಿರುವ ಕೊಡಗು ಜಿಲ್ಲೆಯಲ್ಲಿ ನಿರ್ಮಾಣಗೊಂಡ ಮತ್ತೊಂದು ಬೃಹತ್ ಗಾಜಿನ ಸೇತುವೆಯನ್ನು(ಸ್ಕೈ ವಾಕ್ ಬ್ರಿಡ್ಜ್) ಭಾನುವಾರ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಯಿತು.
ಮಾಲೀಕರಾದ ಕೊಂಬನ ಪ್ರವೀಣ್, ಕಾಂಞಗಡ ಭೀಮಯ್ಯರವರ ತಾಯಿಯಂದಿಯರಾದ ಕಾಂಞಗಡ ದೇಚಮ್ಮ, ಕೊಂಬನ ಕಾವೇರಮ್ಮರವರು ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭ ಅರ್ಚಕರಾದ ವೆಂಕಟರಮಣ, ಕಿಶೋರ್‌ರವರು ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಮಾಲೀಕರಾದ ಕಾಂಞಗಡ ಭೀಮಯ್ಯ, ನೂತನ ಸ್ಕೈ ವಾಕ್ ಗ್ಲಾಸ್ ಬ್ರಿಡ್ಜ್‌ನ್ನು ಮಡಿಕೇರಿ ಹೊರವಲಯದ ಅಬ್ಬಿಫಾಲ್ಸ್, ಮಾಂದಲ್‌ಪಟ್ಟಿಗೆ ತೆರಳುವ ರಸ್ತೆಯ ಬದಿಯಲ್ಲಿರುವ ಜಾಗದಲ್ಲೇ ನಿರ್ಮಿಸಲಾಗಿದೆ. ೧೮೦ ಮೀಟರ್ ಉದ್ದ, ೮ ಅಡಿ ಅಗಲ, ೨೭೦ ಅಡಿ ಎತ್ತರದಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು ೧೫ ಟನ್ ಭಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್‌ನಲ್ಲಿ ಒಮ್ಮೆಗೆ ೩೦ ರಿಂದ ೩೫ ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದಾಗಿದೆ. ಮಳೆಗಾಲ, ಚಳಿಗಾಲದ ಸಮಯದಲ್ಲಿ ಮೋಡಗಳ ಮರೆಯಲ್ಲಿ ಥ್ರಿಲ್ಲಿಂಗ್ ಅನುಭವ ಪ್ರವಾಸಿಗರಿಗೆ ಸಿಗಲಿದೆ ಎಂದು ವಿವರಿಸಿದರು.
ಆಕರ್ಷಕ ವ್ಯೆವ್ ಪಾಯಿಂಟ್: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಸವಿಯಲು ಬಹುತೇಕ ಮಂದಿ ಬಯಸುತ್ತಾರೆ. ಹಚ್ಚ ಹಸಿರಿನ ವನಸಿರಿ, ಭೋರ್ಗರೆಯುವ ಜಲಪಾತಗಳ ರಾಶಿ ಸವಿಯುವುದೇ ಪ್ರವಾಸಿಗರಿಗೆ ಸಂಭ್ರಮ. ಅದರಲ್ಲೂ ಹಸಿರಿನ ಸೌಂದರ್ಯ ಸವಿಯಲು ಚಾರಣಗಳನ್ನು ಕೈಗೊಳ್ಳುತ್ತಾರೆ. ಸದ್ಯ ಇಂತಹ ಹಸಿರ ಸೌಂದರ್ಯ ಸವಿಯುವ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಮಾರ್ಗ: ಮಡಿಕೇರಿ ನಗರದಿಂದ ಸುಮಾರು ೫ ಕಿಮೀ ಸಂಚಾರ ಮಾಡಿದರೆ ಅಬ್ಬಿಫಾಲ್ಸ್ ಜಂಕ್ಷನ್ ಬಳಿ ಇರುವ ನಂದಿಮೊಟ್ಟೆ ಎಂಬ ಸ್ಥಳದಲ್ಲಿ ಈ ಅತೀ ದೊಡ್ಡ ಗ್ಲಾಸ್ ಬ್ರಿಡ್ಜ್ ಸಿಗುತ್ತದೆ. ಇದೇ ಮಾರ್ಗವಾಗಿ ಅಬ್ಬಿಫಾಲ್ಸ್, ಮಾಂದಲ್‌ಪಟ್ಟಿಗೆ ತೆರಳಬಹುದಾಗಿದೆ.