

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ಆಯೋಜಿಸಿದ್ದ ‘ರೈತ ಸಂತೆ’ಯಲ್ಲಿ ಹೂವು-ಹಣ್ಣು, ಸಿರಿಧಾನ್ಯ ಹಾಗೂ ಗೋಮಯ ವಸ್ತುಗಳಿಗೆ ಭಾರಿ ಬೇಡಿಕೆ ಕಂಡುಬಂದಿತು. ಶ್ರಾವಣ ಶನಿವಾರ ಹಿನ್ನೆಲೆ ದಂಪತಿ ಸಮೇತ ಆಗಮಿಸಿದ್ದ ಸಾವಿರಾರು ನಾಗರಿಕರು ಪೂಜೆ, ಪುನಸ್ಕಾರಕ್ಕೆ ತರಾವರಿ ಹೂ-ಹಣ್ಣುಗಳನ್ನು ಖರೀದಿಸಿ ಮನೆಗೆ ಒಯ್ದರು.
ಪ್ರತಿ ತಿಂಗಳು ಕೊನೆಯ ಶನಿವಾರ ನಡೆಯುವ ಈ ರೈತ ಸಂತೆ ಇತ್ತೀಚಿಗೆ ಜನಪ್ರಿಯವಾಗತೊಡಗಿದೆ. ರಿಯಾಯಿತಿ ದರದಲ್ಲಿ ಕೃಷಿ ಉತ್ಪನ್ನಗಳು ಹಾಗೂ ವಿವಿಧ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗುವುದರಿಂದ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಬಾರಿ ಅನಾನಸ್, ಹಲಸು, ಮಾವು, ನೇರಳೆ, ಅಣಬೆ, ನುಗ್ಗೆಸೊಪ್ಪು, ತೆಂಗಿನಕಾಯಿ ಹೆಚ್ಚು ಬಿಕರಿಯಾದವು. ತಾಜಾ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುವುದರಿಂದ ಜನರು ಮುಗಿಬಿದ್ದು ಖರೀದಿ ಭರಾಟೆ ನಡೆಸಿದರು.
ಗೋಮಯ ಸಾಮಗ್ರಿಗಳ ಬಿಕರಿ:
ಸಂತೆಯಲ್ಲಿ ಸಗಣಿಯಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಪರಿಸರ ಸ್ನೇಹಿ ಗೋಮಯ ಸಾಮಗ್ರಿಗಳ ಬಗ್ಗೆ ಮಳಿಗೆಯವರು ಜನರಿಗೆ ಮಾಹಿತಿ ನೀಡಿದರು. ವೈವಿಧ್ಯಮಯ ಹಣತೆಗಳು, ಓಂ-ಶ್ರೀ-ಸ್ವಸ್ತಿಕ್ ನಾಮಫಲಕಗಳು, ಧೂಪದ ಬಟ್ಟಲು ಊದುಬತ್ತಿ ಗಮನ ಸೆಳೆದವು.
ಸ್ವ ಸಹಾಯ ಸಂಘಗಳಿಂದ ಮಾರಾಟ:
ವಿವಿಯ ರೇಷ್ಮೆ ಕೃಷಿ ವಿಭಾಗವು ಹೊಸ ಬಗೆಯ ಅಲಂಕಾರಿಕ ಉತ್ಪನ್ನಗಳನ್ನು ತಯಾರಿಸಿ ಅವುಗಳಿಗೆ ಮಾರುಕಟ್ಟೆ ಕಲ್ಪಿಸಲು ಮುಂದಾಗಿದೆ. ಹಲವು ಸ್ವ ಸಹಾಯ ಸಂಘಗಳ ಕರಕುಶಲ ವಸ್ತುಗಳು, ಮಸಾಲ ಪದಾರ್ಥಗಳು, ಅಡಕೆ ಉತ್ಪನ್ನ, ರಾಜಮುಡಿ ಅಕ್ಕಿ, ಸಾವಯವ ಬೆಲ್ಲ, ಗೃಹ ಅಲಂಕಾರಿಕ ಸಾಮಗ್ರಿಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು.
ಕೃಷಿ ವಿವಿಯ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ. ವೈ.ಎನ್.ಶಿವಲಿಂಗಯ್ಯ, ರಘುಪ್ರಸಾದ್, ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಜರಿದ್ದರು.
ಎತ್ತಿನ ಬಂಡಿ ಸವಾರಿ:
ಸಂತೆಯಲ್ಲಿ ಎತ್ತಿನ ಬಂದಿ ಸವಾರಿ ಮಕ್ಕಳನ್ನು ಆಕರ್ಷಿಸಿತು. ಮಕ್ಕಳು ಹಾಗೂ ಯುವಜತೆ ಗುಂಪುಗಳಲ್ಲಿ ಕ್ಯಾಂಪಸ್ ಆವರಣದಲ್ಲಿ ಸುತ್ತಾಡಿದರು. ಹಸು, ಕರು ಹಾಗೂ ಎತ್ತುಗಳು ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಅಲಂಕಾರಿಕ ಮೀನುಗಳಾದ ಕಪ್ಪು ಏಂಜೆಲ್, ಮೋಲಿ, ಗಪ್ಪಿ, ಕೊಟ್ಟಿಬಾಲ ಇತ್ಯಾದಿ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಲವರು ತರಾವರಿ ಮೀನುಗಳನ್ನು ಖರೀದಿಸಿ ಮನೆಗೆ ಒಯ್ದರು.