

ಲೋಕಾ ದಾಳಿ, ಕೋಟ್ಯಂತರ ರೂ. ಅವ್ಯವಹಾರ ಪತ್ತೆ
11 ಅಧಿಕಾರಿಗಳ ಮೇಲೆ ಕೇಸ್ ದಾಖಲು
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಜಿಲ್ಲೆಯ ಗೋಕಾಕ ತಹಸೀಲ್ದಾರ್ ಕಚೇರಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಕೋಟ್ಯಂತರ ರೂ. ಅನುದಾನ ದುರ್ಬಳಕೆ ಆಗಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿ, ಇಬ್ಬರು ಗ್ರೇಡ್-2 ತಹಸೀಲ್ದಾರ್, ಏಳು ಗ್ರಾಮ ಲೆಕ್ಕಾಧಿಕಾರಿಗಳು, ಇಬ್ಬರು ಕಂದಾಯ ಇನ್ಸಪೆಕ್ಟರ್ ಸೇರಿ 11 ಜನರ ಮೇಲೆ ಕೇಸ್ ದಾಖಲಿಸಿದ್ದಾರೆ.
ಗೋಕಾಕ ತಹಸೀಲ್ದಾರ್ ಕಚೇರಿಯ ಗ್ರೇಡ್-2 ತಹಸೀಲ್ದಾರ್ಗಳಾದ ಸಾಗರ ಕಟ್ಟಿಮನಿ, ಎಸ್.ಟಿ.ಬೇಟಗೇರಿ, ಕಂದಾಯ ನಿರೀಕ್ಷಕ ಶಿವಾನಂದ ಎಸ್.ಹೀರೇಮಠ, ಗ್ರಾಮ ಆಡಳಿತ ಅಧಿಕಾರಿಗಳಾದ ತುಕಾರಾಮ ಪಮ್ಮಾರ, ವಿನಯ ತಳ್ಳಿ, ಎಂ.ಎಸ್.ಗಡಕರಿ, ಮಲ್ಲಿಕಾರ್ಜುನ ಹಂಚಿನಾಳ, ಸಿದ್ರಾಮ್ ಎಸ್.ಹಿಪ್ಪರಗಿ, ರಂಜಿತ್ ಆರ್.ಚೌಹಾಣ, ಜಗದೀಶ ಎಸ್. ಚೂರಿ, ಬಸವರಾಜ ಕೆಂಚರಡ್ಡಿ ಲೋಕಾ ದಾಳಿಗೆ ಒಳಗಾದವರು.
ಗೋಕಾಕ, ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಅರ್ಹರಿಗೆ ಅನುದಾನ ನೀಡದೆ, ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ಹಣ ಸಂದಾಯ ಮಾಡಿ ಸರ್ಕಾರದ ಅನುದಾನ ದುರ್ಬಳಕೆ ದೂರಿನನ್ವಯ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸಂಧ್ಯಾ ಸುರಕ್ಷಾ ಯೋಜನೆಯಡಿ 180 ಪ್ರಕರಣಗಳಲ್ಲಿ 59 ಲಕ್ಷ ರೂ. ಅವ್ಯವಹಾರ ಪತ್ತೆಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ನೂರಾರು ಕೋಟಿ ರೂ. ಅನುದಾನ ದುರ್ಬಳಕೆ ಮಾಡಿಕೊಂಡಿರುವುದು, ವಿವಿಧ ಸೌಲಭ್ಯ ಕಲ್ಪಿಸಲು ಸಾರ್ವಜನಿಕರಿಂದ ಲಂಚ ಪಡೆದಿರುವುದು, ಅನರ್ಹರಿಗೆ ಸೌಲಭ್ಯ ಕಲ್ಪಿಸಿರುವುದು ದಾಖಲೆಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಕೋಟ್ಸ್
ಗೋಕಾಕ ತಹಸೀಲ್ದಾರ್ ಕಚೇರಿ ಮೇಲೆ ದಾಳಿ ವೇಳೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಕೋಟ್ಯಂತರ ರೂ. ಅವ್ಯವಹಾರ ಆಗಿರುವುದು ಪತ್ತೆಯಾಗಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ. ಇಲ್ಲಿಯವರೆಗೆ 11 ಜನರ ಮೇಲೆ ಕೇಸ್ ದಾಖಲಿಸಿದ್ದೇವೆ.
ಹಣಮಂತರಾಯ, ಲೋಕಾಯುಕ್ತ ಎಸ್ಪಿ ಆಡಳಿತ