ಸೋಮಾರಿತನ ಬಿಟ್ಟರೆ ಗೌರವ ಪ್ರಾಪ್ತಿ : ಸ್ವಾಮಿ ಮಹಾಮೇಧಾನಂದಜಿ ಅಭಿಮತ

18
Published on

ಮೈಸೂರು:  ವಿದ್ಯಾರ್ಥಿಗಳಿಂದ ಗೌರವ ಸಿಗಬೇಕಾದರೆ ಶಿಕ್ಷಕರು ಮೊದಲು ಸೋಮಾರಿತನ ಬಿಡಬೇಕು ಎಂದು ಶ್ರೀರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸ್ವಾಮಿ ಮಹಾಮೇಧಾನಂದಜಿ ಅಭಿಪ್ರಾಯಪಟ್ಟರು.

ನಗರದ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ತಾವು ಓದುತ್ತಿದ್ದಾಗ ವೇಳೆಯಲ್ಲಿ ನಿಮ್ಮ ಶಿಕ್ಷಕರು ಕೊಟ್ಟಿರುವ ನೋಟ್ಸ್ ಅನ್ನೇ ನೀವು ಈಗಿನ ವಿದ್ಯಾರ್ಥಿಗಳಿಗೂ ನೀಡುವವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹತ್ತಾರು ವರ್ಷಗಳ ನೋಟ್ಸ್ ಅನ್ನೇ ಶಿಕ್ಷಕರು ನೀಡುವುದರಿಂದ ಮುಂದಿನ ಪೀಳಿಗೆಗೆ ಏನನ್ನು ಕೊಟ್ಟಂತೆ ಅಗುತ್ತದೆ ಎಂದು ಪ್ರಶ್ನಿಸಿದ ಅವರು, ಅಂತಹ ಶಿಕ್ಷಕರಿಗೆ ವಿದ್ಯಾರ್ಥಿಗಳೂ ಗೌರವ ಕೊಡುವುದಿಲ್ಲ ಎಂದರು.

ತೊಡಕು ನಿವಾರಣೆ ಮಾಡಿ:

ಶಿಕ್ಷಕರಿಗೆ ನಿಜವಾದ ಗೌರವ-ಸಮ್ಮಾನಗಳು ದೊರಕಬೇಕು ಎಂದರೆ ಅವರು ಆಲಸ್ಯ ಬಿಡಬೇಕು. ಶಿಷ್ಯನ ಅಭ್ಯಾಸದಲ್ಲಿ ಉಂಟಾಗುವ ತೊಡಕನ್ನು ನಿವಾರಣೆ ಮಾಡುವವರು ನಿಜವಾದ ಗುರುಗಳು. ಹಣ-ಅಧಿಕಾರ, ಸಂಬಳವನ್ನು ಪೋಷಣೆ ಮಾಡದೇ ಜ್ಞಾನ ದಾಹವನ್ನು ಪೋಷಣೆ ಮಾಡುವವರೇ ನೈಜ ಶಿಕ್ಷಕರು ಎಂದು ಸ್ವಾಮಿ ಮಹಾಮೇಧಾನಂದಜಿ ಹೇಳಿದರು. ಪ್ರಾಮಾಣಿಕ ಗುರುಗಳನ್ನು ಶಿಷ್ಯರು ಯಾವಾಗಲೂ ಪೂಜೆ ಮಾಡುತ್ತಾರೆ. ಶಿಕ್ಷಕರು ಆತ್ಮಶಕ್ತಿ ಹಾಗೂ ಜ್ಞಾನವನ್ನು ಶಾಶ್ವತವಾಗಿ ಹೊಂದಿರಬೇಕು. ಇಲ್ಲದಿದ್ದರೆ ಗುಮಾಸ್ತರಿಗೂ ಶಿಕ್ಷಕರಿಗೂ ವ್ಯತ್ಯಾಸವೇ ಇರುವುದಿಲ್ಲ. ಶಿಕ್ಷಕನಿಗೆ ಜ್ಞಾನವಿಲ್ಲದಿದ್ದರೆ ಸಮಾಜ ಚಲನೆಯನ್ನೇ ಕಳೆದುಕೊಳ್ಳುತ್ತದೆ. ಚಲನೆ ಕಳೆದುಕೊಂಡ ಸಮಾಜ ಒಂದು ದಿನ ನಾಶವಾಗುತ್ತದೆ. ಆದ್ದರಿಂದ ಶಿಕ್ಷಕರು ಜ್ಞಾನದಾಹಿಗಳಾಗಿ ಇರಬೇಕು ಎಂದರು.

ಸ್ವಾಮಿ ವಿವೇಕಾನಂದ, ರಾಧಾಕೃಷ್ಣನ್, ಕುವೆಂಪು ಅವರು ತಮ್ಮ ಶಿಷ್ಯರಿಗಾಗಿ ಸ್ವಾರ್ಥವನ್ನು ತ್ಯಾಗ ಮಾಡಿದ್ದರು. ಜೀವಿಗಳ ಸೇವೆ ಮಾಡಿದರೆ ದೇಶ ಸ್ವಾರ್ಥಪರವಾಗುವುದಿಲ್ಲ. ಇದರಿಂದಾಗಿ ಅಭಿವೃದ್ಧಿಯಾಗುತ್ತದೆ ಎಂದರು.

ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ದೇವರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರ ಬಳಗದ ಸಂಚಾಲಕ ಪ್ರೊ.ಎಸ್.ಟಿ.ರಾಮಚಂದ್ರ, ಸಹಸಂಚಾಲಕ ಟಿ.ಕೆ. ಕೆಂಪೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net