

ಹರೀಶ್ ಮೋಟುಕಾನ ಮಂಗಳೂರು
ಮಂಗಳೂರು ನಗರದಲ್ಲಿ ಸಂಚಾರ ಸಮಸ್ಯೆ ಸರಿಪಡಿಸುವ ಹಾಗೂ ಅಧಿಕೃತ ಆಟೋರಿಕ್ಷಾ ನಿಲ್ದಾಣ ಕೊರತೆ ನೀಗಿಸುವ ಉದ್ದೇಶದಿಂದ ಸಂಚಾರ ಪೊಲೀಸರು ಸಮೀಕ್ಷೆ ನಡೆಸಿದ್ದು, 210 ಆಟೋರಿಕ್ಷಾ ನಿಲ್ದಾಣಗಳಿಗೆ ಅವಕಾಶ ನೀಡುವಂತೆ ಮಹಾನಗರ ಪಾಲಿಕೆಗೆ ವರದಿ ಸಲ್ಲಿಸಿದ್ದಾರೆ.
ನಗರದಲ್ಲಿ ನೊಂದಾಯಿತ ಆಟೋರಿಕ್ಷಾ ನಿಲ್ದಾಣಗಳು 68 ಮಾತ್ರ ಇದೆ. ಈ ಪೈಕಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆದ ರಸ್ತೆ ವಿಸ್ತರಣೆ, ಫುಟ್‌ಪಾತ್ ನಿರ್ಮಾಣ, ಚರಂಡಿ ಕಾಮಗಾರಿ ಸಂದರ್ಭ ಸುಮಾರು 20ರಷ್ಟು ನಿಲ್ದಾಣಗಳು ಅಸ್ತಿತ್ವ ಕಳೆದುಕೊಂಡಿವೆ. ಅನಧಿಕೃತವಾಗಿ ಸುಮಾರು 300 ಆಟೋರಿಕ್ಷಾ ನಿಲ್ದಾಣಗಳು ನಗರದಲ್ಲಿವೆ.
ಪೊಲೀಸ್ ವರದಿಯನ್ನು ಆಧರಿಸಿ ಪಾಲಿಕೆ 210 ಆಟೋರಿಕ್ಷಾ ನಿಲ್ದಾಣಗಳನ್ನು ಅಧಿಕೃತಗೊಳಿಸಿದರೆ ಒಟ್ಟು ಅಧಿಕೃತ ನಿಲ್ದಾಣಗಳ ಸಂಖ್ಯೆ ಹೆಚ್ಚಾಗಲಿದೆ. ಇದೇ ಸಮಯದಲ್ಲಿ ಅನಧಿಕೃತವಾಗಿರುವ ನಿಲ್ದಾಣಗಳ ಪೈಕಿ ಸಂಚಾರ ಸಮಸ್ಯೆಗೆ ತೊಡಕಾಗಬಹುದಾದ ನಿಲ್ದಾಣಗಳನ್ನು ಪೊಲೀಸರು ತೆರವು ಮಾಡುವ ಸಾಧ್ಯತೆಯೂ ಇದೆ.
2013ರಲ್ಲಿ ಮನಪಾ ಕಂದಾಯ ಇಲಾಖೆ, ಪೊಲೀಸರು, ಆಟೋರಿಕ್ಷಾ ಯೂನಿಯನ್‌ಗಳು ಸೇರಿ ನಡೆಸಿದ್ದ ಸಮೀಕ್ಷೆಯಲ್ಲಿ 500 ಆಟೋರಿಕ್ಷಾ ನಿಲ್ದಾಣ ಮಾಡಬಹುದು ಎಂದು ವರದಿ ನೀಡಲಾಗಿತ್ತು. 2018-19ರ ಪಾಲಿಕೆ ಸಭೆಯಲ್ಲಿ 241 ಆಟೋರಿಕ್ಷಾ ನಿಲ್ದಾಣಗಳಿಗೆ ಅವಕಾಶ ನೀಡಲು ಅನುಮೋದನೆ ದೊರಕಿತ್ತು. ಆದರೆ ಅದು ಅನುಷ್ಠಾನಕ್ಕೆ ಬಂದಿಲ್ಲ. ಸ್ಮಾರ್ಟ್‌ಸಿಟಿ ಕಾಮಗಾರಿಗಳಿಂದಾಗಿ ಇದ್ದ ಆಟೋ ನಿಲ್ದಾಣಗಳು ಕೂಡ ಇಲ್ಲದಂತಾಗಿದೆ. ಈಗ ಕನಿಷ್ಠ 241 ಅಧಿಕೃತ ಆಟೋ ನಿಲ್ದಾಣಗಳಿಗಾದರೂ ಅವಕಾಶ ನೀಡಬೇಕು ಎಂದು ಆಟೋ ಯೂನಿಯನ್ ಮುಖಂಡರು ಒತ್ತಾಯಿಸಿದ್ದಾರೆ.
ಸ್ಮಾರ್ಟ್‌ಸಿಟಿ ಯೋಜನೆಯಲ್ಲೇ ಮಾಡಲಿ: 2015ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಆರಂಭವಾಗುವಾಗ ಆಟೋರಿಕ್ಷಾ ನಿಲ್ದಾಣಗಳ ಅಭಿವೃದ್ಧಿ ಕೂಡ ಮಾಡಲು ಮನವಿ ಮಾಡಿದ್ದೆವು. ಆದರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು 20 ಬಸ್ ತಂಗುದಾಣ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆಯೇ ಹೊರತು ಆಟೋರಿಕ್ಷಾ ನಿಲ್ದಾಣ ಮಾಡುವ ಕಡೆಗೆ ಮನಸ್ಸು ಮಾಡಿಲ್ಲ ಎಂದು ಆಟೋರಿಕ್ಷಾ ಚಾಲಕರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ 210 ಆಟೋರಿಕ್ಷಾ ನಿಲ್ದಾಣಗಳಿಗೆ ಅಧಿಕೃತವಾಗಿ ಅವಕಾಶ ನೀಡಬಹುದು ಎಂದು ಪಾಲಿಕೆಗೆ ವರದಿ ಸಲ್ಲಿಸಿದ್ದೇವೆ. ಸಂಚಾರ ವ್ಯವಸ್ಥೆ ಸರಿಯಾಗಬೇಕು. ಆಟೋ ನಿಲ್ದಾಣಗಳಿಗೆ ಅಧಿಕೃತ ಅವಕಾಶವಾಗಬೇಕು ಎಂಬ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿದೆ. ಎಂ.ಎ.ನಟರಾಜ್, ಎಸಿಪಿ, ಸಂಚಾರ ವಿಭಾಗ ಆಟೋರಿಕ್ಷಾ ಚಾಲಕರು, ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ಪೊಲೀಸರು ನೀಡಿದ ವರದಿಯನ್ನು ಅನುಷ್ಠಾನಗೊಳಿಸಿ ಅದರಂತೆ ಆಟೋರಿಕ್ಷಾ ನಿಲ್ದಾಣಗಳನ್ನು ಅಧಿಕೃತವಾಗಿ ಮಾಡಿಕೊಡಲು ಸಿದ್ದರಿದ್ದೇವೆ. ಪ್ರೇಮಾನಂದ ಶೆಟ್ಟಿ, ಮೇಯರ್ ಮಂಗಳೂರು ನಗರದಲ್ಲಿ 7 ಸಾವಿರ ಆಟೋರಿಕ್ಷಾಗಳು ಓಡಾಡುತ್ತಿವೆ. ಅವುಗಳ ನಿಲುಗಡೆಗೆ 210 ನಿಲ್ದಾಣಗಳು ಸಾಕಾಗುವುದಿಲ್ಲ. 2018-19ರಲ್ಲಿ ಪಾಲಿಕೆ ನಿರ್ಧರಿಸಿದಂತೆ 241 ಆಟೋ ನಿಲ್ದಾಣ ಮಾಡಿಕೊಡಬೇಕು. ಒಂದು ನಿಲ್ದಾಣದಲ್ಲಿ ಇಂತಿಷ್ಟೇ ಆಟೋಗಳು ನಿಲುಗಡೆಯಾಗಬೇಕು ಎಂದು ಸಂಖ್ಯೆ ನಿಗದಿ ಮಾಡಬಾರದು. ಅರುಣ್ ಕುಮಾರ್, ಮಂಗಳೂರು ನಗರ ಆಟೋ ಯೂನಿಯನ್ ಒಕ್ಕೂಟ ಕಾರ್ಯದರ್ಶಿ