ಆರ್ ಆಂಡ್ ಆರ್‌ಗೆ ಲಕ್ಷ ಕೋಟಿ ರೂಪಾಯಿ ಅನುದಾನ ಕೊಟ್ಟರೆ ಸನ್ಮಾನ; ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದ್ದು ಯಾರಿಗೆ?

Bellubbi
Published on

ವಿಜಯಪುರ: ಆಲಮಟ್ಟಿ ಅಣೆಕಟ್ಟೆ ಎತ್ತರದಿಂದ ಮನೆ, ಆಸ್ತಿ ಕಳೆದುಕೊಳ್ಳುವವರಿಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಲಕ್ಷ ಕೋಟಿ ರೂ. ಅನುದಾನ ಹಾಗೂ ಮುಳವಾಡ ಏತ ನೀರಾವರಿ ಮೂರನೇಯ ಹಂತವನ್ನು ಅನುಷ್ಠಾನಗೊಳಿಸಿದರೆ ನಾನೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವ ಶಿವಾನಂದ ಪಾಟೀಲರಿಗೆ ಸನ್ಮಾನ ಮಾಡುವೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಘೋಷಿಸಿದರು.

ಕೊರ್ತಿ ಕೊಲ್ಹಾರ ಸೇತುವೆ ನಿರ್ಮಾಣ ಹಾಗೂ ನೂತನ ತಾಲೂಕು ರಚನೆಯಲ್ಲಿ ಸಚಿವ ಶಿವಾನಂದ ಪಾಟೀಲರ ಪಾತ್ರ ಎಳ್ಳಷ್ಟೂ ಇಲ್ಲ. ಕೊರ್ತಿ ಕೊಲ್ಹಾರ ಸೇತುವೆ, ಮುಳವಾಡ ಏತ ನೀರಾವರಿ ಮೊದಲನೇ ಹಂತ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳಾಗಿರುವುದು ನನ್ನ ಅಧಿಕಾರವಧಿಯಲ್ಲಿ. ಬೇಕಾದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಸವಾಲೆಸೆದರು.

ಈ ಹಿಂದೆ ಸಣ್ಣ ಸೇತುವೆ ಮಳೆಗಾಲ ಸಮಯದಲ್ಲಿ ಬಂದ್ ಆಗುತ್ತಿತ್ತು. ಶಾಶ್ವತವಾಗಿ ಸೇತುವೆ ಮುಳುಗುವ ಹಂತಕ್ಕೂ ಬಂದಿತ್ತು. ಆಗ ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ದೊಡ್ಡ ಹೋರಾಟ ಮಾಡಿದೆ, ಕೊಲ್ಹಾರದಿಂದ ವಿಜಯಪುರ ನಗರಕ್ಕೆ ನೀರು ಸಂಪರ್ಕ ಬಂದ್ ಮಾಡಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಈ ವೇಳೆ ನಮ್ಮನ್ನು ಬಂಧಿಸಲು ಆಗಮಿಸಿದ ಪೊಲೀಸ್ ಅಧಿಕಾರಿಗಳು ಈ ಸೇತುವೆ ಅನಿವಾರ್ಯತೆ ಮನಗಂಡು ಬಂಧಿಸಿರಲಿಲ್ಲ ಎಂದರು.

ಈ ಹೋರಾಟಕ್ಕೆ ಅನೇಕ ಬಾರಿ ಶಾಸಕರಾಗಿದ್ದ ದಿ.ಬಿ.ಎಸ್. ಪಾಟೀಲ ಮನಗೂಳಿ ಸಹ ಬೆಂಬಲಿಸಲಿಲ್ಲ, ಹಾಲಿ ಸಚಿವರಾಗಿರುವ ಶಿವಾನಂದ ಪಾಟೀಲರು ಅಂದು ಹೋರಾಟಕ್ಕೂ ಬಂದಿರಲಿಲ್ಲ ಎಂದರು.

ಮುಳವಾಡ ಮೊದಲನೇ ಹಂತದ ನೀರಾವರಿ ಯೋಜನೆ, ನಿಡಗುಂದಿ, ಕೊಲ್ಹಾರ ತಾಲೂಕು ಕೇಂದ್ರ ನಿರ್ಮಾಣವಾಗಿದ್ದು ನನ್ನ ಅವಧಿಯಲ್ಲಿ. ಕೂಡಗಿಯಲ್ಲಿ ಎನ್‌ಟಿಪಿಸಿ ತರುವಲ್ಲಿ ಸಂಸದ ರಮೇಶ ಜಿಗಜಿಣಗಿ ಹಾಗೂ ನನ್ನ ಪಾತ್ರ ಪ್ರಮುಖವಾಗಿದೆ ಎಂದು ಎಸ್.ಕೆ. ಬೆಳ್ಳುಬ್ಬಿ ತಿಳಿಸಿದರು.

ಮಾತ್ರವಲ್ಲ ‘ಈ ಎಲ್ಲ ಯೋಜನೆಗಳ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ, ಪೆಂಡಾಲ್ ಸಹ ನಾನೇ ಹಾಕುವೆ, ಅವರು ಚರ್ಚೆಗೆ ಬರಲಿ ಸಾಕು, ನಾನು ಬೇಜವಾಬ್ದಾರಿತನದಿಂದ ಮಾತನಾಡುವುದಿಲ್ಲ, ಅವರು ವೇದಿಕೆಗೆ ಬರಲಿ, ನಾನೂ ಬರುವೆ, ಈ ಸಾಧನೆ ಅವರ ಸಾಧನೆ ಎಂದು ಸಚಿವ ಶಿವಾನಂದ ಪಾಟೀಲರು ಸಾಬೀತು ಪಡಿಸಿದರೆ ಅಲ್ಲಿಯೇ ಪಿಸ್ತೂಲ್ ಮೂಲಕ ನಾನು ಹೊಡೆದುಕೊಂಡು ಸಾಯುತ್ತೇನೆ, ಸಾವಿಗೆ ನಾನು ಹೆದರುವ ಮಗ ನಾನಲ್ಲ, ಈ ಸವಾಲು ಅವರು ಸ್ವೀಕರಿಸಲಿ’ ಎಂದು ಪಂಥಾಹ್ವಾನ ನೀಡಿದರು.

ಮುಖಂಡರಾದ ಕಲ್ಲಪ್ಪ ಸೊನ್ನದ, ಇಸ್ಮಾಯಿಲ್ ತಹಸೀಲ್ದಾರ್, ಪರಶುರಾಮ ಗಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net