ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರೆ ಅದೇ ದೊಡ್ಡ ಆಸ್ತಿ

IMG-20250216-WA0116
Published on

 ಸಾಲಿಗ್ರಾಮ: ಆಸ್ತಿ, ಅಂತಸ್ತು ಮಾಡುವುದಕ್ಕಿಂತ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರೆ ಸಾಕು. ಅದೇ ಸಮಾಜಕ್ಕೆ ನೀವು ಕೊಟ್ಟ ದೊಡ್ಡ ಆಸ್ತಿ ಅಂತಸ್ತು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುಚಂದ್ರ ತಿಳಿಸಿದರು.

ಸಾಲಿಗ್ರಾಮ ಪಟ್ಟಣದ ಎಸ್‌ಎಲ್‌ಆರ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಧನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದಷ್ಟಕ್ಕೆ ಎಲ್ಲ ಶಿಕ್ಷಣವನ್ನು ಶಿಕ್ಷಕರೇ ಕೊಡುತ್ತಾರೆ ಎಂದು ಭಾವಿಸಬೇಡಿ. ನೀವು ಕೂಡ ಶಿಕ್ಷಕರೊಂದಿಗೆ ಮಗುವಿನ ವಿದ್ಯಾಭ್ಯಾಸದ ಬಗ್ಗೆ ಶಾಲೆಗಳಿಗೆ ಭೇಟಿ ನೀಡಿ ವಿಚಾರಿಸಿದರೆ ಮಗುವಿನ ನಿತ್ಯದ ನಡವಳಿಕೆ ತಿಳಿಯುತ್ತದೆ. ಆಗ ಆ ಮಗುವಿನ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಅನುಕೂಲವಾಗುತ್ತದೆ. ಹಾಗಾಗಿ ಪಾಲಕರು ಶಿಕ್ಷಕರೊಂದಿಗೆ ದಿನನಿತ್ಯ ಒಡನಾಟ ಇಟ್ಟುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮಕ್ಕಳ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ವರ್ಷಕ್ಕೆ 5 ಸಾವಿರ ರೂ.ನಿಂದ 5 ಲಕ್ಷ ರೂ.ಗಳವರೆಗೆ ಶಾಲಾ ಶುಲ್ಕವನ್ನು ಕಟ್ಟಿ ಹತ್ತಾರು ಶಿಕ್ಷಣ ಕೊಡಿಸುತ್ತಿದ್ದೀರಿ. ಆದರೆ ಆ ಮಗುವಿನ ವಿದ್ಯಾಭ್ಯಾಸ ದಿನನಿತ್ಯ ಯಾವ ಮಾರ್ಗದಲ್ಲಿ ಸಾಗುತ್ತಿದೆ ಎಂಬುದನ್ನು ನೀವು ಗಮನಿಸಲ್ಲ. ಸೂಕ್ಷ್ಮವಾಗಿ ಪಾಲಕರು ಗಮನಿಸಬೇಕು. ನೂರಾರು ಶಿಕ್ಷಣ ಸಂಸ್ಥೆಗಳಿದ್ದರೇನು ಪ್ರಯೋಜನವಿಲ್ಲ. ಯಾವ ಶಾಲೆಯಲ್ಲಿ ಮಕ್ಕಳಿಗೆ ಯಾವ ರೀತಿ ಶಿಕ್ಷಣ ಸಿಗುತ್ತಿದೆ ಎಂಬುದು ಬಹುಮುಖ್ಯ. ಅದರಲ್ಲಿ ಸಾಲಿಗ್ರಾಮದ ಸಾಧನ ವಿದ್ಯಾ ಸಂಸ್ಥೆ ಮಕ್ಕಳನ್ನ ಸಾಧನೆಯುತ್ತ ಕೊಂಡೊಯ್ಯುತ್ತಿದೆ. ಇಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಉತ್ತಮ ಕಲಿಕೆ ನಡೆಯುತ್ತಿರುವುದನ್ನು ಗಮನಿಸಿದ್ದೇವೆ. ಹಾಗಾಗಿ ಇಂತಹ ಶಾಲೆಗಳನ್ನು ಪ್ರೋತ್ಸಾಹಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಶಾಲೆಯಲ್ಲಿ ಪ್ರೀ ಕೆಜಿ ಎಲ್‌ಕೆಜಿ, ಯುಕೆಜಿ ಮತ್ತು ಒಂದರಿಂದ 10ನೇ ತರಗತಿವರೆಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಜತೆಗೆ ಶಿಕ್ಷಕರು, ಪಾಲಕರು ಮತ್ತು ತಂದೆ-ತಾಯಿ ಹಾಗೂ ಸಂಬಂಧಿಕರ ಬಾಂಧವ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳಿಗೆ ಕಲಿಯುವ ಹಂತದಲ್ಲಿ ಯಾವ ವಿಷಯಗಳ ಬಗ್ಗೆ ಆಸಕ್ತಿ ಇದೆ ಅಂತಹ ವಿಷಯಗಳ ಬಗ್ಗೆ ಪ್ರೋತ್ಸಾಹಿಸಿದರೆ ಸಾಧನ ಶಾಲೆಯಲ್ಲಿರುವ ಮಕ್ಕಳು ಸಾಧನೆ ಮಾಡುತ್ತಾರೆ ಎಂದು ಸಲಹೆ ನೀಡಿದರು.

ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು. ಶಾಲೆಯೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಪಾಲಕರನ್ನು ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಇದಕ್ಕೂ ಮೊದಲು ಸೇನೆಯಲ್ಲಿ ಹುತಾತ್ಮರಾದ ದೇಶದ ವೀರ ಯೋಧರಿಗೆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಸಂತಾಪ ಸೂಚಿಸಿ ಅವರ ಸಾಧನೆಯನ್ನು ಕೊಂಡಾಡಿದರು.

ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಿ.ಸಿ.ಮಹದೇವ್, ಎಸ್.ಬಿ.ಹರೀಶ್, ಕೆ.ಟಿ.ಮೋಹನ್, ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುಚಂದ್ರ, ಶಿಕ್ಷಕ ಭೇರ್ಯ ಮಹೇಶ್ ಇನ್ನಿತರರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಪುನೀತ್, ಉಪಾಧ್ಯಕ್ಷ ಅಮಿತ್, ಕಾರ್ಯದರ್ಶಿ ಆರ್.ಸೋಮಶೇಖರ್, ಖಜಾಂಚಿ ಹರೀಶ್, ಸವಿತಾ, ನಿರ್ದೇಶಕ ಭರತ್ ಜೈನ್, ಜ್ಯೋತಿ ಜಯಸೇನಾ, ನಿರ್ದೇಶಕಿ ಕೃಪಾ, ಶಿಕ್ಷಕ ಕಾಂತರಾಜ್, ಅಮರ್‌ಜಿತ್ ಜೈನ್, ಅಮಿತ್ ಕುಮಾರ್, ಆರ್.ಪಿ.ಜಗದೀಶ್, ಶಾಂತರಾಜ್, ಕೃಪ ಯಶಸ್ವಿನಿ ಬಾಹುಬಲಿ ಜೈನ್, ಮಹೇಶ್, ಶಿಕ್ಷಕರಾದ ಹರೀಶ್, ಕುಮಾರ್, ರಂಜಿತಾ, ಲೀಲಾವತಿ, ನೈದಿಲೆ, ಅನುಷಾ, ಉಷಾ, ಯಶಸ್ವಿನಿ, ಬಾಲು, ಪಾಲಕರು ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net