

ಎನ್.ಆರ್.ಪುರ: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಮಾಜ ನನಗೆ ನೀಡಿದ್ದನ್ನು ನಾನು ಸಮಾಜಕ್ಕೆ ಅರ್ಪಿಸುತ್ತಿದ್ದೇನೆ ಎಂದು ದಾನಿ ಹಾಗೂ ಉದ್ಯಮಿ ಡಿ.ರಮೇಶ್ ತಿಳಿಸಿದರು.
ಬುಧವಾರ ಬಸ್ತಿಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಆರ್.ಪುರ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಘಟಕದ ಆಶ್ರಯದಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಪರಿಕರ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿ, ನಾನು ಪ್ರತಿ ವರ್ಷ 5 ಶಾಲೆಗಳ 50 ಮಕ್ಕಳಿಗೆ ಶೈಕ್ಷಣಿಕ ಪರಿಕರ ಕಿಟ್ ನೀಡುತ್ತಿದ್ದೇನೆ. ಮುಂದಿನ ವರ್ಷಗಳಲ್ಲೂ ಇದೇ ರೀತಿ ಸಹಾಯ ಮಾಡುತ್ತೇನೆ ಎಂದರು.
ಎನ್.ಆರ್.ಪುರ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಘಟಕದ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ತ್ರಿಕರ್ಣ ಶುದ್ಧಿಯಿಂದ ಕೆಲಸ ಮಾಡಬೇಕು. ನಾವು ಅಂದುಕೊಂಡದ್ದನ್ನು ಹೇಳಬೇಕು. ಹೇಳಿದ್ದನ್ನು ಶುದ್ಧ ಮನಸ್ಸಿನಿಂದ ಮಾಡಬೇಕು. ವಿದ್ಯಾರ್ಥಿಗಳು ಗುರುಗಳಿಗೆ, ಹಿರಿಯರಿಗೆ ಗೌರವ ನೀಡಬೇಕು. ವಿದ್ಯಾರ್ಥಿಗಳಿಗೆ ಟಿ.ವಿ ಹಾಗೂ ಮೊಬೈಲ್ ಗಳೇ ದೊಡ್ಡ ಶತ್ರು ಎಂದರು.
ಎನ್.ಆರ್.ಪುರ ಸೀನಿಯರ್ ಇಂಟರ್ ನ್ಯಾಷನಲ್ ಘಟಕದ ಅಧ್ಯಕ್ಷ ನಾಗರಾಜ ಪುರಾಣಿಕ್ ಮಾತನಾಡಿ, ಬಸ್ತಿಮಠದ ಸರ್ಕಾರಿ ಶಾಲೆ ಮಕ್ಕಳು ಪ್ರತಿಭಾವಂತರು. ಉದ್ಯಮಿ ಡಿ.ರಮೇಶ್ ನಮ್ಮ ಸಂಸ್ಥೆ ಮೂಲಕ ಮಕ್ಕಳಿಗೆ ಶೈಕ್ಷಣಿಕ ಕಿಟ್ ನೀಡುತ್ತಿರುವುದು ಹೆಮ್ಮೆ ಎಂದರು.
10 ಶಾಲಾ ಮಕ್ಕಳಿಗೆ ಉದ್ಯಮಿ ಡಿ.ರಮೇಶ್ ನೀಡಿದ ಶೈಕ್ಷಣಿಕ ಪರಿಕರ ಕಿಟ್‌ಗಳನ್ನು ಮಕ್ಕಳಿಗೆ ವಿತರಿಸಲಾಯಿತು.
ಬಸ್ತಿಮಠದ ಶಾಲಾ ಮುಖ್ಯಶಿಕ್ಷಕಿ ನೇತ್ರಾವತಿ, ಎಸ್.ಎಸ್.ಜಗದೀಶ್, ಪಿ.ಪ್ರಭಾಕರ್, ಎಚ್.ಆರ್.ದಿನೇಶ್, ಎಚ್.ಬಿ.ರಘವೀರ್, ಲಕ್ಷ್ಮೀಶ, ಶಿವಕುಮಾರ್ ,ಕೆ.ಎಸ್.ರಾಜಕುಮಾರ್, ಪೆನೀನಾ ಇದ್ದರು.