

ಕಿಕ್ಕೇರಿ: ಸಮೀಪದ ಚಿಕ್ಕಮಂದಗೆರೆ ಗ್ರಾಮದಲ್ಲಿರುವ ರೈತ ಸಂಘದ ನಾಯಕಿ ನಂದಿನಿ ಜಯರಾಂ ಅವರ ತೋಟಕ್ಕೆ ಶುಕ್ರವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಆಲೇನಹಳ್ಳಿ ಹಾಗೂ ಚಿಕ್ಕಮಂದಗೆರೆ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಭೇಟಿ ನೀಡಿ ಕೃಷಿ ಬಗ್ಗೆ ತಿಳಿದುಕೊಂಡರು.
ತೋಟದಲ್ಲಿ ವಿವಿಧ ಕೀಟಗಳು ಪರಾಗಸ್ಪರ್ಶ ಕ್ರಿಯೆ ನಡೆಸುತ್ತಿರುವುದನ್ನು ಮಕ್ಕಳಿಗೆ ತಿಳಿಸಿಕೊಟ್ಟ ನಂದಿನಿ ಜಯರಾಂ ಅವರು, ಹೇಮಾವತಿ ನದಿ ತಟದ ಜಮೀನಿನಲ್ಲಿ ವಿವಿಧ ಮರಗಳ ಆಸರೆ ಮಾಡಿಕೊಂಡು ನಿರ್ಮಿಸಿರುವ ಗುಡಿಸಲುಗಳ ಬಗ್ಗೆ ಪರಿಚಯಿಸಿದರು. ಜಲಮಾಲಿನ್ಯ, ವಾಯುಮಾಲಿನ್ಯದಿಂದ ಆಗುತ್ತಿರುವ ವಿನಾಶಕಾರಿ ಸಮಸ್ಯೆ, ಹತ್ತಾರು ರೋಗರುಜಿನಗಳ ಮಾಹಿತಿ ನೀಡಿದರು. ರಾಸಾಯನಿಕಮುಕ್ತ ಜೈವಿಕ ಗೊಬ್ಬರ ಬಳಕೆ ಹಾಗೂ ಅನುಕೂಲದ ಬಗ್ಗೆ ತಿಳಿಸಿಕೊಟ್ಟರು.
ದೇಸಿ ತಳಿಯ ಹಸು, ನಾಟಿಕೋಳಿ ಸಾಕಣೆ, ಜೀವಾಮೃತ ತಯಾರಿಕೆ, ಉಳುಮೆ ಮಾಡುವ ವಿಧಾನ, ಶೂನ್ಯ ಬೇಸಾಯ ಪದ್ಧತಿಯನ್ನು ಮಕ್ಕಳು ತಿಳಿದುಕೊಂಡರು.ಶಿಕ್ಷಕರಾದ ಜಿ.ಜೆ. ತುಳಸಿರಾಂ, ಎಂ.ಆರ್. ರಾಜಣ್ಣ, ಸಂತೋಷ್, ಗೋವಿಂದೇಗೌಡ, ಟಿ. ರಾಜಪ್ಪ, ವನಿತಾ, ರಮ್ಯಾ, ಬಿ.ಆರ್. ಬೇಬಿ, ರೈತ ಮುಖಂಡ ಚಿಕ್ಕಮಂದಗೆರೆ ಜಯರಾಂ ಮತ್ತಿತರರಿದ್ದರು.