ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

19 SND 01
ಸಿಂಧನೂರು ತಾಪಂ ಸಭಾಂಗಣದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಅಪರ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಅಚಪ್ಪ ದೊಡ್ಡಬಸವರಾಜ ಚಾಲನೆ ನೀಡಿದರು. ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ ಎನ್. ರಾಮನಗೌಡ ವಕೀಲ, ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮೀ ಇದ್ದರು.
Published on

ಸಿಂಧನೂರು:ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಪರ್ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಅಚಪ್ಪ ದೊಡ್ಡಬಸವರಾಜ ಹೇಳಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನೆ ರಾಯಚೂರು ಸಂಯುಕ್ತಾಶ್ರಯದಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಉಪಯೋಜನೆಯಡಿ ಬಾಲಕಾರ್ಮಿಕ, ಕಿಶೋರ ಕಾರ್ಮಿಕತೆ ನಿರ್ಮೂಲನೆ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲರೂ ಕಾನೂನು ಅರಿತು ತಮ್ಮ ಇತಿಮಿತಿಯಲ್ಲಿ ನಡೆದುಕೊಂಡರೆ ಸುಖ, ಶಾಂತಿ, ನೆಮ್ಮದಿಯ ಬದುಕು ನಡೆಸಬಹುದು. ಆದ್ದರಿಂದಲೇ ಎಲ್ಲ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು, ಗೃಹಿಣಿಯರು, ವ್ಯಾಪಾರಸ್ಥರು, ಉದ್ಯೋಗಿಗಳು, ನೌಕರರು ಸೇರಿ ಎಲ್ಲ ವರ್ಗದವರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ವಕೀಲ ಎಸ್.ಎಸ್.ಖಾದ್ರಿ ಮಾತನಾಡಿ, ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕುರಿತು ಮಾತನಾಡಿ, ಗ್ರಾಹಕರು ಗ್ರಾಹಕರಿಗಿರುವ ಕಾನೂನಾತ್ಮಕ ಹಕ್ಕುಗಳು ಹಾಗೂ ಅವುಗಳ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಪ್ರತಿಯೊಂದು ವಸ್ತು ಖರೀದಿ ಮಾಡುವ ಸಂದರ್ಭದಲ್ಲಿ ವಸ್ತುವಿನ ಗುಣಮಟ್ಟವನ್ನು ಸರಿಯಾಗಿ ಪರಿಶೀಲನೆ ಮಾಡಿ ಖರೀದಿಸಬೇಕು ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ತುರ್ವಿಹಾಳ, ಲಿಂಗನಗೌಡ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಾ, ತಾಲೂಕು ನ್ಯಾಯವಾದಿಗಳ ಸಂಘದ ಖಜಾಂಚಿ ಶರಣಬಸವ ಉಮಲೂಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net