

ಸದೇಶ್ ಕಾರ್ಮಾಡ್ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಪಮಾನ ದಿನೇ ದಿನೆ ಏರಿಕೆಯಾಗುತ್ತಿದ್ದು, ನಗರದಲ್ಲಿ ನೆಲೆ ಕಂಡುಕೊಂಡಿರುವ ಪ್ರಾಣಿ, ಪಕ್ಷಿಗಳು ಬೇಸಿಗೆಯಲ್ಲಿ ಆಹಾರವನ್ನು ಹುಡುಕುವ ಜತೆಗೆ ನೀರನ್ನು ಹುಡುಕುತ್ತಾ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಿ ಪಕ್ಷಿಗಳ ಹಸಿವು ಹಾಗೂ ದಾಹ ನೀಗಿಸಲು ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುವ ಪ್ರತಿಯೊಬ್ಬರು ಮನೆಯ ಮುಂದೆ ನೀರಿನ ಬಟ್ಟಲು ಇಡುವ ಮೂಲಕ ಅಳಿಲು ಸೇವೆಗೆ ಮುಂದಾಗಬೇಕಿದೆ.
ಈ ಬಾರಿ ಬಿಸಿಲಿನ ತಾಪ ತುಸು ಹೆಚ್ಚಾಗಿಯೇ ಇದ್ದು, ಜನರೊಂದಿಗೆ ಪ್ರಾಣಿ, ಪಕ್ಷಿಗಳು ಸಹ ಬಿಸಿಲಿನ ತಾಪಕ್ಕೆ ಸಿಲುಕಿ ಕಂಗಾಲಾಗಿವೆ. ಮನುಷ್ಯರಾದರೆ ನೀರು, ಆಹಾರವನ್ನು ಕೇಳಿ ಪಡೆಯಬಹುದು. ಆದರೆ, ಮೂಕ ಪ್ರಾಣಿ, ಪಕ್ಷಿಗಳು ನೀರು, ಆಹಾರ ಕೇಳಿ ಪಡೆಯಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ದಾಹ ನೀಗಿಸುವ ಸಲುವಾಗಿ ಸರ್ಕಾರ ತೊಟ್ಟಿಗಳನ್ನು ನಿರ್ಮಿಸಿದೆ. ಆದರೆ, ನಗರ ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಇಂತಹ ವ್ಯವಸ್ಥೆಗಳು ಇಲ್ಲ. ಹೀಗಾಗಿ ನಗರದಲ್ಲಿ ಬೇಸಿಗೆ ಕಳೆಯುವವರೆಗೆ ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗಿದೆ.
ಪ್ರಾಣಿ, ಪಕ್ಷಿಗಳ ಹಸಿವು ನೀಗಿಸುವ ಹಾಗೂ ದಾಹ ತಣಿಸುವ ಪ್ರಯತ್ನವೊಂದು ನಗರದಲ್ಲಿ ಪ್ರಾರಂಭವಾಗಿದ್ದು, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಈ ಸೇವಾ ಕಾರ್ಯ ಕೈಗೊಂಡಿದೆ. ಟ್ರಸ್ಟ್ ನ ಈ ಸೇವಾ ಕಾರ್ಯಕ್ಕೆ ನಗರದ ಹಲವಾರು ನಾಗರಿಕರು ಕೈಜೋಡಿಸುತ್ತಿದ್ದಾರೆ. ಟ್ರಸ್ಟ್ ಕಳೆದ ವರ್ಷ ಪಕ್ಷಿಗಳಿಗೆ ನೀರು ಹಾಗೂ ಆಹಾರ ನೀಡಲು 250ಕ್ಕೂ ಹೆಚ್ಚು ಬಟ್ಟಲುಗಳನ್ನು ನೀಡಿತ್ತು. ಹಲವಾರು ನಾಗರಿಕರು ಬಟ್ಟಲುಗಳನ್ನು ಪಡೆದು ತಮ್ಮ ಮನೆ ಮುಂಭಾಗ, ಉದ್ಯಾನ, ರಸ್ತೆ ಬದಿಯಲ್ಲಿರುವ ಮರಗಳಲ್ಲಿ ಇರಿಸಿ ಪಕ್ಷಿಗಳಿಗೆ ನೀರು, ಆಹಾರ ನೀಡಿದ್ದರು. ಈ ಬಾರಿಯೂ 250 ಕಡೆಗಳಲ್ಲಿ ಬಟ್ಟಲುಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಅದೇ ರೀತಿ ಜಾನುವಾರುಗಳು, ಬೀದಿ ನಾಯಿಗಳ ದಾಹ ತಣಿಸಲು ಕಳೆದ ಬಾರಿ 30 ತೊಟ್ಟಿಗಳನ್ನು ನೀಡಲಾಗಿತ್ತು. ಈ ಬಾರಿ 10 ಕಡೆಗಳಲ್ಲಿ ತೊಟ್ಟಿಗಳನ್ನು ಅಳವಡಿಸಲಾಗಿದೆ.
ಈ ಸೇವಾ ಕಾರ್ಯವನ್ನು ಕೇವಲ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಿಂದ ಮಾತ್ರ ಮಾಡಲು ಸಾಧ್ಯವಿಲ್ಲ. ಕನಿಷ್ಠ 2 ದಿನಗಳಿಗೊಮ್ಮೆಯಾದರೂ ನೀರಿನ ಬಟ್ಟಲು, ತೊಟ್ಟಿಗಳನ್ನು ಶುಚಿಗೊಳಿಸಿ ಶುದ್ಧ ನೀರನ್ನು ತುಂಬಿಸಬೇಕು. ಬೇಸಿಗೆ ಕಳೆದ ತಕ್ಷಣ ಈ ತೊಟ್ಟಿಗಳು ಹಾಗೂ ಬಟ್ಟಲುಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ಮರಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಪ್ರಾಣಿ, ಪಕ್ಷಿಗಳ ಕುರಿತು ವಿಶೇಷ ಕಾಳಜಿ ಇರುವವರನ್ನು ಗುರುತಿಸಿ ಅವರಿಗೆ ನೀರಿನ ತೊಟ್ಟಿ ಮತ್ತು ಬಟ್ಟಲುಗಳನ್ನು ನೀಡಲಾಗುತ್ತಿದೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ಮೈಸೂರಿನ ಹೆಚ್ಚಿನ ಜನರು ತೊಡಗಿಸಿಕೊಂಡರೆ ಈ ಬಾರಿಯ ಬೇಸಿಗೆಯ ಸಂದರ್ಭ ಪ್ರಾಣಿ, ಪಕ್ಷಿಗಳ ದಾಹವನ್ನು ತಣಿಸಬಹುದು.
ನಗರದಲ್ಲಿ ಪ್ರಸ್ತುತ 33-34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಶಿವರಾತ್ರಿಯ ನಂತರ ಬಿಸಿಲಿನ ತಾಪ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಆ ಸಂದರ್ಭ ಆಹಾರ ಹಾಗೂ ನೀರಿನ ಕೊರತೆ ಎದುರಾದಾಗ ಪ್ರಾಣಿ, ಪಕ್ಷಿಗಳು ನಿತ್ರಾಣಗೊಂಡು ಪ್ರಜ್ಞೆ ತಪ್ಪಿ ಬೀಳುವ ಸಾಧ್ಯತೆಗಳು ಹೆಚ್ಚಿದೆ. ಈ ರೀತಿ ಪ್ರಜ್ಞೆ ತಪ್ಪಿ ಬೀಳುವ ಪಕ್ಷಿಗಳ ಪೈಕಿ ಬಹುತೇಕ ಪಕ್ಷಿಗಳು ಸಾವಿಗೀಡಾಗುತ್ತವೆ. ಪಕ್ಷಿಗಳು ನೀರಿನ ಕೊರತೆಯಿಂದ ನಿತ್ರಾಣಗೊಂಡು ಸಾವಿಗೀಡಾಗುವುದನ್ನು ತಪ್ಪಿಸಲು ಜನರು ಒಂದೆರಡು ತಿಂಗಳ ಕಾಲ ಮನೆಯ ಬಳಿ ನೀರು ಇಡುವ ಅಭ್ಯಾಸ ಮಾಡಿಕೊಂಡರೆ ಉತ್ತಮ.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಪ್ರತಿದಿನ ವಿವಿಧ ಸಂಘಟನೆಗಳಿಂದ ಪಕ್ಷಿಗಳಿಗೆ ಆಹಾರ ನೀಡಲಾಗುತ್ತಿದೆ. ಅದೇ ರೀತಿ ಕುಕ್ಕರಹಳ್ಳಿ ಕೆರೆಯಲ್ಲಿ ಪ್ರತಿನಿತ್ಯ ವಾಯುವಿಹಾರಿಗಳು ಪಕ್ಷಿಗಳಿಗೆ ಆಹಾರ ನೀಡುತ್ತಾರೆ. ಅಲ್ಲದೆ, ನಗರದ ಕೆಲವು ನಾಗರಿಕರು ತಮ್ಮ ಮನೆಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡುವ ಉತ್ತಮ ಕಾರ್ಯದಲ್ಲಿ ತಮ್ಮನ್ನು ಪ್ರತಿನಿತ್ಯ ತೊಡಗಿಸಿಕೊಂಡಿದ್ದು, ಈ ಸಂಖ್ಯೆ ಮತ್ತಷ್ಟು ವೃದ್ಧಿಯಾಗುವ ಅವಶ್ಯಕತೆ ಇದೆ.
ನಗರದಲ್ಲಿ ಬೇಸಿಗೆ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರ ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ನಮ್ಮ ಈ ಸೇವಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಗರದ ನಾಗರಿಕರು ಸ್ಪಂದಿಸುತ್ತಿದ್ದಾರೆ. ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರ ನೀಡಲು ಆಸಕ್ತಿ ಇರುವವರನ್ನು ಗುರುತಿಸಿ ನೀರಿನ ತೊಟ್ಟಿ ಹಾಗೂ ಬಟ್ಟಲುಗಳನ್ನು ನೀಡುತ್ತಿದ್ದೇವೆ. ಪ್ರಾಣಿ, ಪಕ್ಷಿಗಳ ಕುರಿತು ಮಕ್ಕಳಲ್ಲಿ ಅರಿವು ಹಾಗೂ ಕಾಳಜಿ ಮೂಡಿಸಲು ಈ ಬಾರಿ ವಿದ್ಯಾರ್ಥಿಗಳಿಗೆ ಬಟ್ಟಲುಗಳನ್ನು ನೀಡುತ್ತಿದ್ದೇವೆ.
ವಿಕ್ರಂ ಅಯ್ಯಂಗಾರ್, ಅಧ್ಯಕ್ಷ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್