

ಬೆಳಗಾವಿ : ಶಿಕ್ಷಣ, ಅರಣ್ಯ, ಪರಿಸರ ಹಾಗೂ ಕ್ರೀಡಾ ಕ್ಷೇತ್ರಗಳು ಮುಂಚೂಣಿಯಲ್ಲಿದ್ದರೇ ಮಾತ್ರವೇ ದೇಶ ಸರ್ವತೋಮುಖ ಪ್ರಗತಿ ಸಾಧಿಸಲು ಸಾಧ್ಯ. ರಾಜ್ಯದಲ್ಲಿ ಕೆಳಸ್ತರದಲ್ಲಿರುವ ಈ ನಾಲ್ಕೂ ರಂಗಗಳನ್ನು ಮೇಲೆತ್ತುವ ಕೆಲಸವಾಗಬೇಕಿದೆ. ಪ್ರತಿಯೊಬ್ಬರಿಗೂ ಇತಿಹಾಸದ ಅರಿವಿರಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್, ಶಾಹುಮಹಾರಾಜ ಸೇರಿದಂತೆ ಮಹಾನ್ ನಾಯಕರ ಕೊಡುಗೆ ಸ್ಮರಿಸುವುದರ ಜತೆಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ, ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ -2023 ಹಾಗೂ ಬೆಳಗಾವಿ (ದ) ಜಿಲ್ಲಾ ಮಟ್ಟದ ಮತ್ತು ನಗರ ವಲಯ ಮಟ್ಟದ ಪ್ರತಿಭಾಕಾರಂಜಿ ಕಲೋತ್ಸವದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದು ದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಮಾದರಿಯಾಗಿ ಹೊರಹೊಮ್ಮಿವೆ. ಆದರೆ, ನಮ್ಮ ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಖಾಸಗಿ ಶಾಲೆ ಮಕ್ಕಳೊಂದಿಗೆ ಪೈಪೋಟಿ ನಡೆಸಲು ಆಗುತ್ತಿಲ್ಲ. ಹಾಗಾಗಿ, ಶೈಕ್ಷಣಿಕ ವ್ಯವಸ್ಥೆ ಉನ್ನತೀಕರಿಸುವಲ್ಲಿ ಶಿಕ್ಷಕರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ತಮ್ಮಿಂದ ಕಲಿತ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎನ್ನುವ ಕುರಿತು ಶಿಕ್ಷಕರು ನಿಗಾ ವಹಿಸಬೇಕು. ಅವರ ಸಾಧನೆ ಇತರೆ ಮಕ್ಕಳಿಗೂ ಪ್ರೇರಣೆಯಾಗಬೇಕು.
ಬೇರೆ ದೇಶಗಳಲ್ಲಿ ಶಿಕ್ಷಣ ನೀಡಬೇಕೆನ್ನುವ ಧ್ಯೇಯದಿಂದಲೇ ಶಾಲೆಗಳನ್ನು ತೆರೆಯಲಾಗುತ್ತಿದೆ. ಆದರೆ, ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಾಲೆ ತೆರೆಯಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಲವೆಡೆ ಸರ್ಕಾರಿ ಶಾಲೆ ಮುಚ್ಚಲಾಗುತ್ತಿದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಪ್ರಸ್ತುತ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳ ಜತೆಗೆ, ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಕುರಿತಾಗಿಯೂ ಚರ್ಚೆ ಆಗಬೇಕಿದೆ. ಹಲವು ಶಾಲೆಗಳಲ್ಲಿ ದುರಸ್ತಿ ಕಾಮಗಾರಿ ನಡೆಯಬೇಕು. ಸಕಾಲಕ್ಕೆ ಅತಿಥಿ ಶಿಕ್ಷಕರ ನೇಮಕಾತಿ ಆಗಬೇಕು. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿನ ಕಾಲುಸಂಕಗಳು ಹಾಳಾಗಿದ್ದರಿಂದ ವಿದ್ಯಾರ್ಥಿಗಳಿಗೆ ತರಗತಿಗೆ ಹೋಗಲು ತೊಂದರೆಯಾಗಿತ್ತು. ಅವರಿಗೆ ಅನುಕೂಲವಾಗಲೆಂದು 35 ಕೋಟಿ ವೆಚ್ಚದಲ್ಲಿ 350 ಕಡೆ ಚಿಕ್ಕಸೇತುವೆ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧಕರಿಗೆ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ರಂಗದಲ್ಲಿ ಸಾಧನೆ ಮೆರೆದವರನ್ನು ಗೌರವಿಸಲಾಯಿತು.
ಶಾಸಕ ಆಸೀಫ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಪಂ ಸಿಇಒ ಹರ್ಷಲ್ ಭೋಯರ್, ಡಿಸಿಪಿ ಸ್ನೇಹಾ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿಡಿಪಿಐ ಬಸವರಾಜ ನಾಲತವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ, ಲಕ್ಷ್ಮಣರಾವ ಯಕ್ಕುಂಡಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಿ.ಎಸ್.ಡಿಗ್ರಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ ಹೆಬ್ಳಿ ಸೇರಿದಂತೆ ಇತರರಿದ್ದರು.