

ಕಲಘಟಗಿ: ವಿದ್ಯಾರ್ಥಿಗಳು ದುಶ್ಚಟಗಳನ್ನು ಬಿಟ್ಟು ಸಾಧನೆಯ ಛಲದಿಂದ ಅಭ್ಯಾಸ ಮಾಡಿದಾಗ ಮಾತ್ರ ಬದುಕು ಉಜ್ವಲಗೊಳ್ಳುತ್ತದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮಣಿ ಹೇಳಿದರು.
ಪಟ್ಟಣದ ಗುಡ್ ನ್ಯೂಸ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕ, ಜಿಲ್ಲಾ ಪೊಲೀಸ್ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ವಿರೋಧಿ ಜಾಗೃತಿ ಜಾಥಾ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿದ ಅವರು, ಜೀವನದಲ್ಲಿ ಏಳಿಗೆ ಕಾಣಲು ಸತತ ಪರಿಶ್ರಮ ಬೇಕು. ಆದರೆ, ಹಾಳು ಮಾಡಿಕೊಳ್ಳಲು ಮೊಬೈಲ್ ಎಂಬ ಭೂತವನ್ನು ಅಂಗೈಲಿ ಹಿಡಿದರೆ ಸಾಕು, ಕ್ಷಣಾರ್ಧದಲ್ಲಿ ನಾಶಗೊಳಿಸುತ್ತದೆ. ಆದ್ದರಿಂದ ಕಲಿಕಾ ಸಮಯದಲ್ಲಿ ವಿದ್ಯಾರ್ಥಿಗಳು ಮಾದಕ ಹಾಗೂ ಮೊಬೈಲ್ ಗೀಳು ಮರೆತು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಬೇಕು ಎಂದರು.
ಗ್ರಾಮೀಣ ವಿಭಾಗದ ಡಿವೈಎಸ್ಪಿ ವಿನೋದ ಮುಕ್ತೇದಾರ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವಲ್ಲಿ ಮಾದಕ ದ್ರವ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಇದರಿಂದ ಯುವಕರು ನಿಯಂತ್ರಣ ತಪ್ಪಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರ ಇರಬೇಕು ಎಂದರು.
ಸಿಪಿಐ ಶ್ರೀಶೈಲ ಕೌಜಲಗಿ, ಪಿಎಸ್ಐ ಸಿ.ಎನ್. ಕರವೀರಪ್ಪನವರ, ಸಂಸ್ಥೆಯ ಆಡಳಿತ ಅಧಿಕಾರಿ ರೆ.ಬ್ರ ವರ್ಗಿಸ್ ಕೆಜೆ. ರೆ.ಬ್ರ ಅರುಳಾನಂದಮ್ ಪ್ರಾಚಾರ್ಯ ನವೀನಾ ರೆಡ್ಡೇರ್, ಎನ್.ಎಸ್.ಎಸ್ ಯೋಜನಾಧಿಕಾರಿ ಜಾಫರ್ ಭಾವನವರ್, ಬಸವರಾಜ ಬಡಿಗೇರ, ರಾಮು ಲಮಾಣಿ ಉಪಸ್ಥಿತರಿದ್ದರು.